Related Notes

Tulunada Daivolu » Notes » Koti - Chennaya / ಕೋಟಿ - ಚೆನ್ನಯ

 • Koti - Chennaya / ಕೋಟಿ - ಚೆನ್ನಯ

  Posted by Sathish Agpala November 19, 2017 - Category: Spirituality - 1,045 views - 0 comments - 0 likes - #daivolu  #tulunada daivolu 


  ಅವಳಿ ವೀರರು ಕಾಯ ಬಿಟ್ಟು ಮಾಯ ಸೇರಿದ ಮೇಲೆ ಸೂತಕದವರಾದರೇ!!! ? 
  <><><><><><><><><><><><><><><><><><><><><><><><
  ಬರಹ - ಸಂಕೇತ್ ಪೂಜಾರಿ
  
       ತುಳುವ ನಾಡಿನ ದೈವಾರಾಧನೆಯ ವಿಷಯ ಚರ್ಚಿಸುವಾಗ ಅದಕ್ಕೆ ಕೊನೆಯ ಹಾಡು ಹಾಡುವುದು ಸುಲಭದ ಮಾತಲ್ಲ. ಅದು ಒಂದು ಕಡಲು, ಹೋದಷ್ಟು ಆಳ, ಹುಡುಕಿದಷ್ಟು ವಿಷಯ. ಎಲ್ಲವೂ ಗೊಂದಲಮಯ. ಇಲ್ಲಿ ನಂಬಿಕೆಯೇ ಮೂಲ. ೧೦೦ ವರ್ಷಗಳ ಹಿಂದೆ ಆದಂತಹ ಎಷ್ಟೊ ಇತಿಹಾಸದ ಚರಿತ್ರೆಗಳಿಗೇ ಗೊಂದಲದ ರೋಗ ತಗಲಿರುವಾಗ, ಇನ್ನೂ ೧೦೦೦ ವರ್ಷಗಳ ಹಿಂದೆ ಆಗಿರುವತಂಹ ಘಟನೆಗಳಿಗೆ ಕಾರಣ ಮತ್ತು ಸತ್ಯಾಸತ್ಯೆಗಳನ್ನು ಹುಡುಕುವುದೆಂದರೆ ಅದು ನಿಜಕ್ಕೂ ಅಸಾದ್ಯದ ಮಾತು. ಅದರಲ್ಲೂ ಯಾವುದೇ‌ ಲಿಖಿತ ದಾಲಖೆಗಳಿಲ್ಲದ‌ ದೈವಾರಾಧನೆಯ ಪ್ರತಿ ಸನ್ನಿವೇಶಕ್ಕೆ ಕಾರಣ‌ ಮತ್ತು ನಿಜಾಂಶ ಹುಡುಕುವುದು ಸುಲಭದ ಮಾತಲ್ಲ. ಆದರೆ ಈ ಪವಿತ್ರವಾದ ದೈವಾರಾಧನ ರಂಗದಲ್ಲಿ ಹಲವು ಬದಲಾವಣೆಗಳು ಅಗತ್ಯಕ್ಕೆ ತಕ್ಕಂತೆ ಆದರೂ ಕೆಲವೊಂದು ವಿಚಾರಗಳು ಜಾತಿ ಮುಖೇನ ಹೊರಬಂದು ಜಾತಿ ವೈಷಮ್ಯಕ್ಕೂ ಕಾರಣವಾದದ್ದು ಇದೆ. 
  
  ಇಲ್ಲಿ‌ ನಾನು ಹೇಳಹೊರಟಿರುವ ವಿಷಯ ಜಾತಿ ವೈಷಮ್ಯದಲ್ಲ. ಆದರೆ ಜಾತಿಗೆ ಉಚಿತವಾಗಿ ಕೊಟ್ಟಿರುವ ಒಂದು ಪಟ್ಟದ ಬಗ್ಗೆ. ಹೌದು ಬಿಲ್ಲವರನ್ನು ಸೂತಕದವರು ಎಂಬ‌ ಮಾತು ದೈವಾರಾಧನ ರಂಗದ‌ ಒಂದು ಚೌಕಟ್ಟಿನಲ್ಲಿ ಕೇಳಿ ಬರುವ ಸಣ್ಣ ಮಾತು. ಇದಕ್ಕೆ ಕಾರಣ ಕೇಳಿದಾಗ ಬರುವ ವಿಚಿತ್ರ ಉತ್ತರ ಬಿಲ್ಲವ ಜಾತಿಯಲ್ಲಿ ಹುಟ್ಟಿದ ಅಮರ್ ಬೊಳ್ಳಿಲು ಎಂದೇ ಕರೆಸಿಕೊಳ್ಳುವ ಕೋಟಿ ಚೆನ್ನಯರಿಗೆ ಅವರು ಕಾಯ ಬಿಟ್ಟು ಮಾಯ ಸೇರಿದ ಮೇಲೆ ಉತ್ತಾರಾಧಿ ಕ್ರಿಯೆಗಳು ಆಗಿಲ್ಲ ಎಂದು. 
  
  ಅವಳಿ ವೀರದ ಉತ್ತರಾಧಿಕ್ರಿಯೆಗಳ ಬಗ್ಗೆ ಮುಂದೆ ವಿಚಾರಿಸೋಣ‌. ಇಲ್ಲಿ‌ ಈಗ ಇರುವ ಪ್ರಶ್ನೆಯೇನಂದರೆ ಬೈದೇರುಗಳು ಅಂದರೆ ಕೋಟಿ ಚೆನ್ನಯರು ಹುಟ್ಟಿದ ನಂತರ ಬಿಲ್ಲವ ಜನಾಂಗದ‌ ಉಗಮವಾಯಿತೇ ಎಂಬುದು. ನಿಜವಾಗಿಯೂ ಅದಕ್ಕೆ ಉತ್ತರ‌ಕೊಡುವ ಅಗತ್ಯವಿಲ್ಲವೆಂದು ನಾನಿಲ್ಲಿ ಭಾವಿಸುತ್ತೇನೆ. ಹಾಗಾದರೆ ಹೇಗೆ ಬಿಲ್ಲವರು ಸೂತಕದವರಾದರು? ನಿಜಕ್ಕೂ ಹಾಸ್ಯಾಸ್ಪದ. ಈ ಮಾತು ಕೆಲವೊಂದು ಪ್ರದೇಶದಲ್ಲಿ ಇಂದಿಗೂ ಕೇಳಿಬರುತ್ತಿದೆ. ಒಂದು ಪಕ್ಷದಲ್ಲಿ ಈ ಮಾತನ್ನು ಒಪ್ಪುವುದಾದರೆ ತುಳುನಾಡಿನ ಅದೆಷ್ಟೊ ದೈವಗಳು ಬಿಲ್ಲವರ ಮುಖಾಂತರ ತುಳುನಾಡಿನಲ್ಲಿ ನೆಲೆನಿಂತಿವೆ. ಹಾಗಾದರೆ ಅವೆಲ್ಲವೂ ಸೂತಕದವರ‌ ಜೊತೆ ಬಂದಂತಾಯಿತಲ್ಲವೆ. ಇದು ಒಂದು ಸಣ್ಣ ವಿಮರ್ಶೆ ಅಷ್ಟೆ. ಸೂತಕದ ವಿಷಯದಲ್ಲಿ ದೇವರಿಗಿಂತಲೂ ಕಟ್ಟು ನಿಟ್ಟಾದ‌ ಕ್ರಮ ದೈವಗಳ ಆಚರಣೆಯಲ್ಲಿ ಇವೆ. ಹೀಗಿರುವಾಗ ಸೂತಕದವರಾದ ಬಿಲ್ಲವರ‌ ಮುಖಾಂತರವೇ ಅನೇಕ ದೈವಗಳು ತುಳುನಾಡಿನಲ್ಲಿ ಆರಾಧನೆಗೊಂಡಿದೆ‌‌ ಎಂದರೆ ಇದಕ್ಕೆ ಏನು ಹೇಳಬೇಕೊ ಗೊತ್ತಾಗುತ್ತಿಲ್ಲ‌. ಇದು ಆಡು ಮಾತಿನ ಅತಿರೇಕವಲ್ಲದೇ‌ ಮತ್ತೇನು ಅಲ್ಲ. ಈ ಮಾತು ಈಗ ಕೇಳಿಸಿ ಕೊಳ್ಳುತ್ತಿರುವುದು ಕಡಿಮೆಯಾಗಿದೆ‌. ಆದರೂ ಒಂದು ತಪ್ಪು ವಿಚಾರ‌ದ ಬೀಜ‌ ಮತ್ತೆ ಹೆಮ್ಮರವಾಗ ಬಾರದೆಂಬ ಕಾರಣಕ್ಕೆ‌ ಈ‌ ವಿಷಯ‌ ಮಂಡಿಸಿದ್ದೇನೆ.
  
  ಇನ್ನು ಬೈದೇರುಗಳ ಅಂತ್ಯದ ನಂತರದ ವಿಚಾರಕ್ಕೆ ಬರೋಣ. ಈಗಲೂ ಹಲವಾರು ಜನ ಹೇಳುವುದು ಬೈದೇರುಗಳಿಗೆ‌ ಅವರ ಸಾವಿನ‌ ನಂತರದ‌ ಉತ್ತರಾಧಿ ಕ್ರಿಯೆಗಳು ಆಗಿಲ್ಲವೆಂಬುವುದು. ಈ ರೀತಿಯ ನಂಬಿಕೆಗೆ ಕಾರಣಗಳು ಹಲವಾರು ಕಂಡಿರಬಹುದು‌. ಆದಕ್ಕೆ ಮುಖ್ಯ ಭಾಗ ಪಾರ್ದನ. ಇದು ದೈವಾರಾಧನೆಯ ಒಂದು ಅಮೂಲ್ಯ ದಾಖಲೆ‌ ಎಂದೇ ಹೇಳಬಹುದು. ಇದು ಬಿಟ್ಟರೆ ದೈವಗಳ ಚರಿತ್ರೆಗೆ ಆಧಾರವೇ‌ ಇಲ್ಲ. ಪಾರ್ದನಗಳು ಪೂರ್ತಿ‌ ಸತ್ಯವೂ ಅಲ್ಲ, ಸುಳ್ಳೂ ಅಲ್ಲ. ಕಾಲಕ್ಕೆ ತಕ್ಕಂತೆ ಮತ್ತು ಕೆಲವೊಂದು ವೈಯಕ್ತಿಕ ಕಾರಣಗಳಿಗೂ ಕೂಡ ಪಾರ್ದನಗಳು ಬದಲಾದ್ದದ್ದು ಇದೆ. ತುಳುನಾಡಿನ ದೈವಗಳ ಪಾರ್ದನಗಳಲ್ಲಿ ಅತೀ ದೀರ್ಘವಾದ ಪಾರ್ದನಗಳು ಎರಡೇ. ಒಂದು ಬೈದೇರುಗಳ ಪಾರ್ದನ ಮತ್ತೊಂದು ಸಿರಿ ಪಾರ್ದನ. ಕೋಟಿ ಚೆನ್ನಯರನ್ನು ದೈವಗಳೆಂದು‌ ಕರೆಯುವ ಪರಿಪಾಠ ಇಲ್ಲ‌. ಅವರನ್ನು ಬೈದೇರುಗಳೆಂದೆ ಕರೆಯುತ್ತಾರೆ. ಆದರೆ ದೈವಾರಾಧನೆಯ ಚೌಕಟ್ಟಿನ ಒಳಗೆ ಇದು ಸೇರಿಕೊಂಡಿದೆ ಅಷ್ಟೇ. ಈ ಬೈದೇರುಗಳ ಪಾರ್ದನಗಳ ಹಲವು ಪಠ್ಯಗಳು ಪ್ರಾದೇಶಿಕವಾಗಿ ಲಭ್ಯವಾಗಿದೆ. ಅದರಲ್ಲಿನ ಅನೇಕ ವಿಷಯಗಳಲ್ಲಿ ವ್ಯತ್ಯಾಸಗಳಿರಬಹುದು. ಹಾಗೇಯೇ ಈ ಅಂತ್ಯಸಂಸ್ಕಾರದ ಬಗೆಗೂ ಗೋಜಲು ಸ್ಥಿತಿ ಉಂಟಾಗಿದೆ. ಹೌದು ಕೆಲವರು ಹೇಳುವಂತೆ ಬೈದೇರುಗಳಿಗೆ ಅಂತ್ಯ ಸಂಸ್ಕಾರದ ನಂತರದ ವಿಧಿಗಳು ಆಗಿಲ್ಲವೆಂಬುದು‌. ಇದು ಅಯಾ ಪಾರ್ದನದ ಉಲ್ಲೇಖಕ್ಕೆ ಒಪ್ಪುವ ಮಾತು. ಅದರೇ ಅಂತ್ಯಸಂಸ್ಕಾರದ ನಂತರದ ವಿಧಿಗಳನ್ನು ಪೂರೈಸಿದ ಬಗೆಗಿನ ಉಲ್ಲೇಖಿತ ಪಾರ್ದನನ್ನು ಹೇಗೆ ಅಲ್ಲಗೆಳೆಯಲಾಗುತ್ತದೆ?. ಹೌದು ಬೈದೇರುಗಳ ಪಾರ್ದನದಲ್ಲಿ ಅವರ ಅಂತ್ಯ ಸಂಸ್ಕಾರವನ್ನು ಜಾತಿ‌ ಸಂಗತರು ಮಾಡಿರುವ‌ ಉಲ್ಲೇಖವಿದೆ‌. ಇನ್ನೊಂದು‌ ಪಠ್ಯದಲ್ಲಿ ಬೈದೇರುಗಳ ಅಂತ್ಯ ಸಂಸ್ಕಾರವನ್ನು ಸ್ವತಃ ಮಾವ ನಾದ ಸಾಯನ ಬೈದ್ಯರೇ‌ ಮಾಡಿರುವ ಉಲ್ಲೇಖ ಇದೆ‌. ಆ ಪಾರ್ದನದ ಪ್ರಕಾರ ಬೈದೇರುಗಳು ಕಾಯಬಿಟ್ಟು‌‌ ಮಾಯ ಸೇರಿದ ನಂತರ‌ ಮೂವರು ಬಳ್ಳಾಲರು ಸೇರಿ‌ ಆ ಸುದ್ದಿಯನ್ನು ಏರಾಜೆ‌ ಬರ್ಕೆಯಲ್ಲಿದ್ದ ಕೋಟಿ ಚೆನ್ನಯರ ಮಾವ ಸಾಯನ ಬೈದ್ಯರಿಗೆ‌ ಓಲೆಮಾನಿ‌ ಕಳುಹಿಸಿ ತಿಳಿಸುತ್ತಾರೆ. ವಿಷಯ‌ ತಿಳಿದ‌ ಸಾಯನ ಬೈದ್ಯರು ದುಃಖದಿಂದ ಘಟನೆ ನಡೆದ‌ ಸ್ಥಳಕ್ಕೆ ಬಂದು ಅಲ್ಲಿ ತಮ್ಮ ಜಾತಿ ಸಂಗತರನ್ನು ಸೇರಿಸಿ ಬೈದೇರುಗಳ ಪವಿತ್ರ ದೇಹವನ್ನು ಕಾಟ ಇಡುತ್ತಾರೆ. ಕಾಟವು ಗಂಧದ ಮರದಿಂದ ಕೂಡಿತ್ತು ಎಂಬ ಉಲ್ಲೇಖ ಪಾರ್ದನದಲ್ಲಿ ಇದೆ‌. ನಂತರ ಅಂತ್ಯ ಸಂಸ್ಕಾರ‌ ಮುಗಿಸಿ ಬೂದಿ ಒಪ್ಪ ಎಂಬ ತುಳುವ ಸಂಪ್ರದಾಯದ ವಿಧಿಯನ್ನೂ ಮಾಡಿಸಿ ೧೬ ನೇ ದಿನಕ್ಕೆ ಅವರಿಗೆ ಬೊಜ್ಜದ ಕ್ರಿಯೆ ಮಾಡಿ ೧೬ ಕ್ಕೆ ಸೇರಿಸುವ ಕ್ರಮವನ್ನು ಮಾಡಿ ಸೂತಕ ಕಳೆಯುತ್ತಾರೆ. 
  
  ಪಾರ್ದನ ಆ ಭಾಗ ಈ ಕೆಳಗೆ ಇದೆ‌.
  ------------------------------------
  "ಆತ್ ಪನ್ನಗ ಪಂಜದ ಬಲಿಪತ್ತಿ ಬಾಕಿಮಾರ್ಡ್ ತೂನಗಾಂಡ
  ಕೋಟಿ ಚೆನ್ನಯೆರ್ ಒರಿಯ ಮೇಲ್ಡ್ ಒರಿಯೆ ಬೂರುದು 
  ಜೀವ ಬುಡುದು ವೈಕುಂಠ ಸೇರ್ದೆರೆ ಕೈಬುಡುದು‌ ಕೈಲಾಸ ಸೇರಿನ ಬಾಲೆಲೆನ್ ತೂಯೆ ಏರಾಜೆ ಬರಿಕೆದ ಸಾಯನೆಯೋ.. ಆ.. ಏ.
  
  ಆತೆನ ಪೊರ್ತುಗು ಸಾಯನ ಬೈದ್ಯೆ ಜಾತಿ ಸಂಗತೆರೆನ್ ಲೆತ್ತ್ ಬಾಮ್ಯೊನುದು ಇತಿ ಲೆತ್ತ್ ಬಾಮಿದ್ ಸಾವಿರ ಕಡ್ಯ ಚಂಡಿರ್ ಡ್ ಸಾವಿರ ಕಡ್ಯ ಬೆಂದರ್ಡ್   ಇನಿ ಪುಣನ್ ದೆತ್ತ್ ಪುಣ ಸುದ್ದ ನಿರ್ಪ ಮಲ್ಪಾದೆ, ಪುಣನ್ ಸುದ್ದ ನಿರ್ಪ ಮಲ್ಪಾದ್ ತೆನ್ಕಾಯಿ ಬಡಕಾಯಿ ಬಂಗ ಬಾರೆದ ಕೊಡಿಯೆ ಕಡ್ಪಾದ್ ಇನಿ ದುತೈತ ಐತ ಸಿಂಗಾರ ಮಲ್ಪದಾಂಡ ಬಾಲೆಲೆನ್ ಬಂಗ ಬಾರೆದ ಕೊಡಿ ಇರೆಟ್ ತೆನ್ಕಾಯಿ ಬಡಕಾಯಿ ಜೆಪುಡಾದ್ ಇನಿ ಬೊಲ್ದು ಪಟ್ಟೆ ಪೊದೆತೆ ಇನಿ ಸಾಯನ ಬೈದ್ಯೆ.
  
  ಬೊಲ್ದು ಪಟ್ಟೆ ಪೊದೆತ್ ಅವುಲಾಂಡವೋ ಅಡ್ಕಡ್ ಜವನಂದ ಕಾಟ ಗೊರಾವೊಡುಂದು ಪನ್ನಗ... ಆ...ಏ..
  
  ಸಾಯನ ಬೈದ್ಯೆ ಜಾತಿ ಸಂಗತೆರೆನ್ ಲೆತ್ದೆ ನನ ಸಾಯಿರ 
  ಕಡ್ಯ ಬೆಂದರ್ಡ್ ಬೆಪ್ಪೊ ಕೊರಿಯೆನೇ ಸಾಯಿರ ಕಡ್ಯ ಚಂಡಿರ್ಡ್ ಸಂಪೊ ಮಲ್ತೇ..
  ಕೋಟಿ ಚೆನ್ನಯೆರೆನೆ ನನ ಕೊಂಡೊಯಿನ ತೂಕಿ‌ ಉಜ್ಜಾಲ್ಡ್ 
  ಮಲ್ಪಯಿ ಐತ ಸಿಂಗಾರ ಮಲ್ಪಯೆನೆ..
  ಬಂಗಬಾರೆದ ಪೊಂಗ ಕೊಡಿ ಕಡ್ಪಾದೆ ಕೊಳಲದ ಕಂಡೊಡು ತೆನ್ಕಾಯ ಬಡಕಾಯ‌ ಜೆಪುಡಾದೆನೆ..
  ಮುಸುಕು ಪಾಡ್ದೆ ನನ ತರೆನಂಚೆ ಕಾರ್ ನಂಚೆ‌ ನಂದಾದೀಪ ಪೊತ್ತಾದ್ ದೀಪಯೆ ತರೆನಂಚಿ ಅರಿಯೇ ಕಾರ್ನಂಚಿ 
  ಬಾರ್ ದೊರಿಪಾಯೆನೆ ನನ ಸಿರಿಗಿಂಡೆದ ನೀರ್ ಪತ್ಯೆ 
  ತೊಳಸಿದ ಕೊಡಿ‌ ನನ ಪತ್ಯೆ ಇನೆವುಲ್ಲ ಬಂಟೆರೆಗ್ ಸಿರಿಗಿಂಡೆದ ನೀರ್ ತೊಳಸಿದ ಕೊಡಿ ಪತ್ತ್ ದ್ ಬಾಯಿಗ್ ನೀರ್ ಕೊರ್ಪೆ ಸಾಯನೆ.. ಯೆಂಕ್ ಕೊರ್ಪಿಂಚಿ ಜೇವು ಅರ್ವತ್ತಲ್ ನಿಕ್ಲೆಗ್ ಏನ್ ಕೊರ್ಪಿಲೆಕ್ಕ ಆಂಡೆ, ಕಡೆ ಕಣ್ಣ್
  ಡ್ ಕೊಡಿ ದುಃಖ ಕಡೆಯೆನೆ ಸಾಯನೆ, ಬೊಳ್ಳಿ ಸಿರಿಗಿಂಡೆದ ನೀರ್ ಪತ್ಯೆ ತೊಳಸಿದ ಕೊಡಿ ನೀರ್ ಮುರ್ಕಾದ್ ಬುಡಿಯೆ ಓ ಬಾಲೆಲೆ ಬಾಲೆಲೆಂದ್ ದೇವೆರೆ ಅಪ್ಪಣೆ ದೆತೊನ್ಲೆ, ಕೇಪುಲದ ಮಲೆ ಕೆಮ್ಮಗೆದ ಕರಿಯದ ಜಯವುಲ್ಲ ಬೆರ್ಮೆರೆ ಬಲಭಾಗೊಡು ಆವೊನಿ. 
  ಕೇಪುಲದ ಮಲೆ ಕೆಮ್ಮಗೆದ ಕರಿಯದ ಜಯವುಲ್ಲ ಬೆರ್ಮೆರೆ ಬಲಭಾಗೊಡು ಆವೊನಿ ಬಂಟೆರೆ ಪಂಜದ ಗರೊಡಿಡ್ ಗರಡಿ ಕಟ್ಟಾದ್ ಎಣ್ಮೂರುಡು ಎಣ್ಮೂರ ಬಾರಿ ಮಂಜುಲ್ಲ ಪೆರ್ಗಡೆ ಗರಡಿ ಕಟ್ಟಾದ್ ನಿಕ್ಲೆನ್ ನಂಬುನಗ ಬಾಲೆಲೆ‌ ನಿಕ್ಲೆನ್‌ ನಂಬುನಡೆಗ್‌ ಇಂಬು ಕೊರ್ಲೆ, ನೆನೆತಿ ನಡೆಗ್ ಆನಿ ಸಾರತಿ ಆವೊನ್ಲೆ.
  
  ದೇವೆರೆ ಅಪ್ಪಣೆ ಬೆರ್ಮಾವರ ದೆತೊಂದು ನಿಕ್ಲೆನೆ ಪುದಾರ್ ಪನ್ಪಾವೊಂದು ಪುರಪ್ಪ್ ಲೆಪ್ಪುಡಾವೊಂದು ಇಪ್ಪುಲೆಮ್ಮ ಅಂದ್ ನೀರ್ ಬುಡಡೆ ಸಮ್ಮಲೆ‌ ಸಾಯನೆ ಆ...ಏ...
  
  ಆತ್ ಪನ್ನಗ ಕೊರಿ ನೀರ್ನ್ ಮಾಯೊಡು ಅರ್ಪಿತ ಮಲ್ತೊಂಡೆದೆ ಜಾತಿ ಸಂಗತೆರೆನ್ ಲೆತ್ತ್ ಬಾಮ್ಯೊಂಡೆವೊ
  
  ಇನಿಯಾಂಡ ಕೋಟಿ ಚೆನ್ನಯೆರೆನ್ ಅಂಗೈಡ್ ಕೊಂಡುದು ಪೋಯೆರ್ ಆಲನಂದಡ್ಕಗ್ ಜವನಂದ ಕಾಟೊಗು ಕೊಂಡುದು ತೆನ್ಕಾಯ ಬಡಕಾಯ ಜೆಪುಡಾದ್ ತರೆನಂಚಿ ಮೈತೆರ್ ನೈತ ಪಾಡ ತರೆನಂಚ ಎಣ್ಣೆದ ಪಾಡ‌ ಕಾರನಂಚಿ ಮೈಲ್ದ್ ಗಂಧದ ಕನಕ್ಕ್ ಪಾಡಿಯೆರ್ ಗಂಧದ ಪರಿಮಳ ಕೊರಿಯೆರ್, ತರೆನಂಚಿರ್ದ್ ಕಾರನಂಚಿಡ್ಪಾಂಡ ಅಗ್ಗಿ ನಾಟಾಯೆರ್, ಅಗ್ಗಿ ನಾಟಾದ್ ಆಕಾಸಗ್ ಪುಗೆ ಎರೆಗಾದೆರ್ ಆ.. ಏ...
  
  ಅರಿಯ ಮುರಿಯ ತೂತೆ ಸಾಯನೆ ತರೆಕ ಮೆಯಿಕ ಮೀಯೆ ಮೀಯೊಂದು ಜಾತಿ ಸಂಗತೆರ್ ಸಾಯನ ಬೈದ್ಯಲ ಪೋಪೆರ್ ಇನಿ‌ ಪೋತು ಇನಿಯಾಂಡ ಮನದಾನಿ ಮನದಿನೊಟು ಕೊಲ್ಲಿ ಕೂಟುದೆರ್ ಮೂಜೆಟ್ ಮೂಜನೆ ಕಿರಿಯ ಬೂದಿ ಮುಚ್ಚಯೆರ್ ಬೂದಿ ಮುಚ್ಚಿದ್ ನನ ತುಳುನಾಡ ಕಟ್ಟ್ನ್ ಪತ್ತ್ದ್ ಪತ್ತನೆ ಕಿರಿಯ ಮಲ್ಪಾದೆರೆ ಆ.. ಏ...
  
  ಕೊಲ್ಲಿ ಕೂಟುದೆನೆ ಸಾಯನೆ ಮೂಜೆನಾನಿ ಬೂದಿ‌ ಮುಚ್ಚಿದ್ ಕೋಟಿ ಚೆನ್ನಯೆರೆ ದೂಪೆ ಮುಟ್ಟಾಯೆನೆ, ಸಂಪೊಗು ಸರೊಳಿದ ಪನ್ನೆ ಕುತ್ತುದೆನೆ, ಆ.... ಏ...
  
  ಆತ್ ಮಲ್ತ್ದ್ ಪತ್ತೆಟ್ ನನ ಅರಿಯೆ ಬಿರ್ಕ್ದ್ ಸಾವೋ ಪಾಲೇರ್ ಕರಿತ್ತೇ ಕಂಪಾದ್ ಜಾತಿ ಸಂಗತೆರೆನ್ ಲೆತ್ತ್ ಕೂಟುದು ಮದು ಇನಿ ಪೋದು ನನ ಪತ್ತೆಟ್ ಪತ್ತೇನ ಕಿರಿಯೆ ಮಲ್ಪಾದ್ ಪದಿನಾಜೆ ಪದಿನಾಜೆಟ್ಟ್ ಹಿರಿಯಕುಲೆಗ್ ಕೂಟ ಕೂಟಮ ಕಲಸೆ ಕೂಟುದು ಬುಡಿಯೆನಾ ಆನಿಗಾಂಡ ಆ...ಏ...
  
  ಅಪಗಾಂಡ ಪತ್ತೆತ ತಲಿಪು ನೀರ್ ಪದಿನಾಜೆಟ್ ಪದಿನಾಜಿ ಇರೆ ಪಾಡ್ದ್ ಜಾತಿ ಸಂಗತೆರೆನ್ ದೀವೊಂದು ಪದಿನಾಜೆಕ್ ಕೂಡಿಸಾಯೆ ಆ.. ಏ.. 
  
  ಆತ್ ಪೊರ್ತುಗ್ ಜಾತಿ‌ಕಟ್ಟ್ಡ್ ನೀತಿಡ್ ಕೋಟಿಚೆನ್ನಯರೆಗ್ 
  ಅಪುನ ಕಟ್ಟ್ ಕಟ್ಟಲೆ ಕರಿದ್ ಪೋಂಡು, ಇನಿಯಾಂಡ ಆತ್ ಪೊರ್ತುಗು ಪಂಜದ ಕೇಮರ ಬೂಡುಡು ಬೆಯಿಪ್ಪಾಯಿನ ಬಾರ್ನ್ ಕೊಡಿಪ್ಪಾಯೆರೆ ..........."
  
  ಹೀಗೆ ಪಾರ್ದನ ಮುಂದುವರಿಯುವುದು....
  
  ಈ ಪಾರ್ದನದಲ್ಲಿ ಮೂರು ವಿಷಯಗಳು ಸ್ಪಷ್ಟವಾಗುತ್ತವೆ. ಒಂದು ಬೈದೇರುಗಳಿಗೆ ಉತ್ತಾರಾಧಿ ಕ್ರಿಯೆಗಳು ಸಂಪನ್ನಗೊಂಡಿರುವುದು, ಎರಡನೇದು ಬೈದ್ಯರು ಬೈದೇರುಗಳ ಅಂತ್ಯ‌ಕಾಲದವರೆಗೂ ಬದುಕಿದ್ದರೆಂಬುದು. ಮೂರನೇಯದದ್ದು ಬೈದೇರುಗಳಿಗೆ‌ ಮುಂದಕ್ಕೆ ಪಂಜದಲ್ಲಿ ಮತ್ತು ಎಣ್ಮೂರಿನಲ್ಲಿ ಗರಡಿ ನಿರ್ಮಾಣವಾಗುತ್ತದೆ ಎಂದು ಸಾಯನ‌ ಬೈದ್ಯರು ಹೇಳಿರುವುದು. 
  
  ಹೀಗಿರುವಾಗ ಬೈದೇರುಗಳು ಹೇಗೆ ಸೂತಕದವರಾದರೋ ತಿಳಿದಿಲ್ಲ‌‌ . ಪಾರ್ದನದ ಆಧಾರದಲ್ಲೇ ಆರಾಧನೆ ನಡೆಯುವು ತಿಳಿದ ಸಂಗತಿ‌, ಹಾಗಿರುವಾಗ ಈ ಪಾರ್ದನವನ್ನು ಯಾಕೆ ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ತಿಳಿಯದ ವಿಚಾರ. ಕೆಲವು ಪ್ರದೇಶದಲ್ಲಿ ‌ಕೆಲವು‌ ಜನಾಂಗ‌‌ ಬೈದೇರುಗಳಿಗೆ ಅಂತ್ಯ ಸಂಸ್ಕಾರ ಆಗಿಲ್ಲ ಎಂಬ ಕಾರಣಕೊಟ್ಟು ಇಂದಿಗೂ ಗರಡಿ ಪ್ರವೇಶ ಮಾಡದಿರುವುದು ನಿಜಕ್ಕೂ ವಿಪರ್ಯಾಸ.
  
  ಇನ್ನೊಂದು ವಿಚಿತ್ರವೆಂದರೆ ಕಾಯ ಬಿಟ್ಟು‌ಮಾಯ ಸೇರಿ ದೈವತ್ವ ಪಡೆದ ತುಳುನಾಡಿದ‌ ಮನುಷ್ಯ ಮೂಲದ ದೈವಗಳಿಗೆ‌ ಯಾವ ಸೂತಕವಿದೆಯೋ ತಿಳಿದಿಲ್ಲ.
  
  ದೈವಗಳೆಂದರೆ ಅದು ಪವಿತ್ರವಾದುದು ಅಂತಹುದರಲ್ಲಿ ಅಂತಹ ದೈವಿಕ ಶಕ್ತಿಗಳಲ್ಲೇ ಮೈಲಿಗೆ ಇದೆ ಎಂದರೆ ನಿಜಕ್ಕೂ ಇದು ಯಾವ ರೀತಿಯ ಪರಿಕಲ್ಪನೆಯೋ ಗೊತ್ತಾಗುತ್ತಿಲ್ಲ.
   
  ಇನ್ನು ಇಲ್ಲಿ ಬಹಳ ಗಮನಿಸಬೇಕಾದ ವಿಚಾರವೇನೆಂದರೆ ತುಳುನಾಡಿನಲ್ಲಿ ಬಿಲ್ಲವ ಜನಾಂಗ ಸೇರಿದಂತೆ ಇನ್ನೂ ಬೇರೆ ಜನಾಂಗದಲ್ಲೂ ಹಲವು ವ್ಯಕ್ತಿಗಳು ದೈವತ್ವ ಪಡೆದು ಆರಾಧನೆಗೊಳ್ಳುತ್ತಿದ್ದಾರೆ. ಉದಾ ಕಲ್ಕುಡ- ಕಲ್ಲುರ್ಟಿ, ಮುಗೇರ್ಲು, ಕಾನದ- ಕಟದ, ಕೊರಗ ತನಿಯ, ಕೋಡ್ದಬ್ಬು, ಬಲಾಂಡಿ ಇತ್ಯಾದಿ. ಆದರೆ ಬೈದೇರುಗಳನ್ನು ಬಿಟ್ಟು ಇನ್ನುಳಿದ ಹೆಚ್ಚಿನ ಯಾವುದೇ ಮಾನವ ಮೂಲದ ದೈವಗಳ ವಿಷಯದಲ್ಲಿ ಸೂತಕದ ಪ್ರಸ್ತಾಪವೇ ಇಲ್ಲ. ಅದರ ಪಾರ್ದನದಲ್ಲಿ ಉಲ್ಲೇಖವೂ ಇಲ್ಲ‌. ಯಾರೂ ಇದನ್ನು ಪ್ರಶ್ನಿಸುವುದಿಲ್ಲ. ಆದರೆ ಬೈದೇರುಳ ವಿಚಾರದಲ್ಲಿ ಮಾತ್ರ ಸೂತಕದ ಗಂಟು ಬಿಚ್ಚಿಕೊಳ್ಳದೇ ಹಾಗೇ ಉಳಿದುಬಿಟ್ಟಿದೆ. ಇದಲ್ಲದೇ ಬೈದೇರುಗಳಿಗೆ ಸಮಾಧಿಯು ಕೂಡ ಇದ್ದು ಅಂತ್ಯ ಸಂಸ್ಕಾರ ಉತ್ತಾರಾಧಿ ಕ್ರಿಯೆಗಳಾಗದೆ ಸಮಾಧಿ‌ ನಿರ್ಮಾಣ ಮಾಡುವರೇ? ಯೋಚಿಸಬೇಕಾದ ಸಂಗತಿ. ಇನ್ನೂ‌ ಬೈದೇರುಗಳು ಮಾಯ ಸೇರಿದ ನಂತರ ಸೂತಕ ಕಳೆಯಲು ಬಡಕಾಯಿ ಗಂಗೆಗೆ ಹೊಗುವ ವಿಚಾರ ಕೆಲವೊಂದು ಕತೆಯಲ್ಲಿ ಇದೆ‌. ಮಾಯ ಸೇರಿದ ಪವಿತ್ರ ವೀರ ಪುರುಷರಿಗೆ ಸೂಕತವೇ?. 
  ಒಂದು ಕತೆಗೆ ಮತ್ತೊಂದು ಕತೆಯನ್ನು‌ ಪೋಣಿಸಲು ಇಲ್ಲಿ ಈ ರೀತಿಯ ಸಂದರ್ಭ ಉಂಟಾಯಿತೇ. 
  ಏನಿದರ ಮರ್ಮ? ಯಾಕೆ‌ ಸೂತಕದ ವಿಚಾರ ಇವರ ಆರಾಧನೆಯಲ್ಲಿ ಎದ್ದು ಕಾಣುತ್ತಿದ್ದೆ? ಇದರ ಹಿಂದಿನ ನಿಜ ಕತೆಗೆ ಉತ್ತರ‌ ಸಿಗಬಹುದೇ? ಗೊತ್ತಿಲ್ಲ. 
  
  ಇನ್ನೂ ಬೈದೇರುಗಳ ಆರಾಧನ‌ ಸಮಯದಲ್ಲಿ ಎಳೆಯಲಾಗುವ ಗರಿಯ ಎಂಬ ವಿಧಿಯ‌ ಬಗ್ಗೆ ನನಗೆ ಗೊಂದಲ ಇನ್ನೂ ಹಾಗೇಯೆ ಇದೆ. ಈ ವಿಧಿಯ ಇತಿಹಾಸವೇನು? ಇದು ಎಷ್ಟು ಪ್ರಾಚೀನ ? ಇದನ್ನು ಬೈದೇರುಗಳ ಸಂಸ್ಕಾರಕ್ಕೆ ಹೋಲಿಸುತ್ತಾರೆ‌. ಇದು ಹೇಗೆ? ಅದರಲ್ಲಿ ಬಳಸುವ ವಸ್ತುಗಳ ಬಗೆಗಿನ ಅರ್ಥವೇನು. ಅದೇ ವಸ್ತುಗಳನ್ನು ಬಳಸಬೇಕೆಂಬ ಕಾರಣಗಳೇನು. ಅದರ ಮೂಲ ತಾತ್ಪರ್ಯವೇನು. ಇದು ಇತಿಹಾಸದ‌ ಪುಟಗಳಲ್ಲಿ ಮರೆಯಾದ ಸತ್ಯ ‌ಎಂದು‌‌ ನನಗೆ ತೋಚುತ್ತಿದೆ. ಯಾಕೆಂದರೆ ಹಲವು ಗರಡಿಗಳಲ್ಲಿ ಗರಿಯ ಹಾಕುವ ಸಂಪ್ರದಾಯವೇ ಇಲ್ಲ‌. ಇದಕ್ಕೆ ಕಾರಣವೇನಿರಬಹುದು‌. ಇದು‌ ಪ್ರಾಚೀನ ಆರಾಧನೆಯ ಪಳೆಯುಳಿಕೆಯೋ? ಗೊತ್ತಿಲ್ಲ‌. ಬೈದೇರುಗಳ ನೇಮದ ವಿಧಿಗೆ ದೇವು ಬಲ್ಲಾಳನ ಕಟ್ಟು‌ ಎಂಬ ಮಾತಿದೆ‌. ಅಂದರೆ‌ ಎಣ್ಮೂರಿನ ದೇವು‌‌ ಬಲ್ಲಾಳರು‌ ಮಾಡಿದ ವಿಧಿ‌ ಎಂದು. ಹಾಗಾದರೇ‌ ಗರಿಯ ಹಾಕುವ ವಿಧಿ‌ಯ ಮೂಲ ಯಾರು? ಸಾಯನ‌ ಬೈದ್ಯರು‌ ಅವರಿಗೆ‌ ಎಲ್ಲಾ ಕ್ರಿಯಗಳನ್ನು ಮಾಡಿರುವಾಗ‌ ಮತ್ತೆ ಅದನ್ನು‌ ಅರಾಧನ‌ ರಂಗದಲ್ಲಿ ತೋರಿಸುವುದ‌ರ‌ ಬಗೆ ಯಾಕೆ? ಇದು ಉತ್ತರ‌ ಸಿಗದ‌‌ ಪ್ರಶ್ನೆ? 
  
  ಇಲ್ಲಿ ನಾನು ಬೈದೇರುಗಳ ಅನಾದಿ ಕಾಲದಿಂದ ನಡೆದು ಬಂದು‌ ಅರಾಧನ‌ ಕ್ರಮಗಳನ್ನು‌ ನಿಲ್ಲಿಸಬೇಕೆಂದೋ ಅಥವಾ ಅದು ತಪ್ಪೆಂದೊ ಹೇಳುವ ಯಾವ ಪ್ರಯತ್ನವನ್ನೂ ನಾನು ಮಾಡಿಲ್ಲ ‌. ಇಲ್ಲಿ ಆರಾಧನೆಯ ಮೇಲಿನ ಮೂಲ‌ ನಂಬಿಕೆ ಮಾಸಿ ಹೋಗಿ ಬೇರೊಂದು‌ ವಿಚಾರ ಕ್ರಮೇಣವಾಗಿ ಅಚರಣೆಗೆ ಪೂರಕವಾಗಿ ಬಂದಿರಬೇಕೆಂದೋ ಅಥವಾ ಸೂಕತ ಛಾಯೆಯನ್ನು ಎತ್ತಿ ಹಿಡಿಯಲು ಇದನ್ನು ಮಾಡಲಾಗಿದೊ ಎಂಬುದು ನನ್ನ‌ ಅಭಿಪ್ರಾಯ.
  ಬೈದೇರುಗಳನ್ನು ಸೂತಕದವರು‌ ಎಂಬ ಹೇಳಿಕೆಯನ್ನು ನನಗೆ ಒಪ್ಪಲಾಗುತ್ತಿಲ್ಲ. ಅದ್ದರಿಂದ ಮೇಲಿನ‌ ವಿಚಾರಗಳನ್ನು ‌ಬರೆದಿರುತ್ತೇನೆ‌. ತುಳುನಾಡಿನ‌ ಎಲ್ಲಾ ಆರಾಧನ ಶಕ್ತಿಗಳು ದೈವಿಕವಾಗಿ‌ ಪವಿತ್ರವಾದವುಗಳು ಅಂತೆಯೇ ಬೈದೇರುಗಳು‌ ಕೂಡ ತಮ್ಮ ಜೀವಿತಾವಧಿಯಲ್ಲೂ ಕೂಡ ತಮ್ಮ ದೈಹಿಕ‌ ಮತ್ತು ಮಾನಸಿಕ ವ್ಯಕ್ತಿತ್ವಕ್ಕೆ ಯಾವುದೇ‌ ರೀತಿಯಲ್ಲಿ ಮೈಲಿಗೆಯಾಗದಂತೆ ನಡೆದುಕೊಂಡಿರುವಂತಹ ಅಮೂಲ್ಯ ರತ್ನಗಳು, ಅಂತಹ ಶಕ್ತಿಗಳಿಗೆ ತಲೆಬಾಗಿ ವಂದಿಸುತ್ತಾ‌ ಈ ಬರೆವಣಿಗೆಗೆ ಪೂರ್ಣವಿರಾಮನ್ನಿಡುತ್ತಿದ್ದೇನೆ.
  
  ಬರಹ - ಸಂಕೇತ್ ಪೂಜಾರಿ

 • 0 comments