Tulunada Daivolu » Notes » ಶ್ರೀಕೊಡಮಣಿತ್ತಾಯ ದೈವದ - Kodamanittaua

 • ಶ್ರೀಕೊಡಮಣಿತ್ತಾಯ ದೈವದ - Kodamanittaua

  Posted by Sathish Agpala October 3, 2017 - 812 views - 0 comments - 0 likes - #Kodamanittaua 
  ಶ್ರೀಕೊಡಮಣಿತ್ತಾಯ ದೈವದ ಮೂಲಕಥೆ
  ಮೂಲ ಪಾರ್ದನ ಆಧಾರಿತ

  ತುಳುನಾಡಿನ ದೈವಸಾಮ್ರಾಜ್ಯದಲ್ಲಿ ರಾಜನ್ ದೈವವಾಗಿ ಮೆರೆಯುತ್ತಿರುವ ಶ್ರೀಧರ್ಮದೈವ ಕೊಡಮಣಿತ್ತಾಯನ ಮೂಲ ಉಗಮದ ಕಥೆ ಬಲುರೋಚಕ...
  ಕರ್ನಾಟಕದ ಕಡಲ ಕಿನಾರೆಯ ಇತಿಹಾಸ ಜೈನ, ಬಂಟ ಅರಸರ ಆಡಂಬೊಲ,ಗುತ್ತು ಬಾಳಿಕೆಯ ಬಾಂಧವ್ಯ...
  ತುಳುವರ ರಾಜ್ಯ ವೈಭವಕ್ಕೆ ಸಾಕ್ಷಿಯಾಗಿ ಮೆರೆಯುತ್ತಿರುವ ರಾಜ್ಯ ಕೊಡಮಣಿತ್ತಾಯನ ಆರಾಧನಾ ವಿಧಿ,ಕಟ್ಟುಕಟ್ಟಳೆ ,ಮೂಲ ಪರಂಪರೆ,ಬಲು ವಿಶಿಷ್ಟ....

  ತುಳುನಾಡಿನ ಜೈನರಸರ ಪ್ರತಿಷ್ಟಿತ ಮನೆತನ ಪೆರಿಂಜೆಯ ಕೊಡಮಣಿ ಬಾಳಿಕೆ..
  ಆ ಮನೆತನದ ಯಜಮಾನರು ಮೂಲ ಕುಂಜ್ಞನಾಳ್ವರು...
  ಅವರು ತನ್ನ ಕುಲಕ್ಕೆ ದೈವ ಸಹಾಯಕ್ಕೆ ಭೂತ ಬೇಕೆಂದು ತುಳುವರ ದೈವಉಗಮದ ಮೂಲಸ್ಥಳವಾದ ಪೆರಿಯ ಬಡಕಾಯಿ ಗಂಗೆಯ ಆಯನೋತ್ಸವಕ್ಕೆ ಹೊರಡಲನುವಾಗುತ್ತಾರೆ...

  ಆ ಪ್ರಕಾರವಾಗಿ ತಲೆಗೆ ಎಣ್ಣೆ ಮೈಗೆ ಎಣ್ಣೆ ಹಚ್ಚಿ ಜಲಕಶುದ್ಧವಾಗಿ ಮೈಲಿಗೆಯನ್ನು ಕಳಚಿ ಮಡಿಬಟ್ಟೆಯನ್ನು ತೊಟ್ಟು
  ಮೈಯೆಗೆ ಶಾಲು,,
  ಸೊಂಟಕ್ಕೆ ಕಚ್ಚೆ ಬಿಗಿದು,
  ತಲೆಗೆ ಮುಂಡಾಸು ಕಟ್ಟಿ ಕೈಯಲ್ಲೊಂದು ರಾಜದಂಡವನ್ನು ಹಿಡಿದು ಮದುಮಗನಂತೆ ಸಿಂಗರಿಸಿಕೊಂಡು
  ಪೆರಿಯ ಬಡಕಾಯಿ ಗಂಗೆಯ ಆಯನೋತ್ಸವಕ್ಕೆ ಹೊರಡುತ್ತಾರೆ...
  ಆ ಸಮಯದಲ್ಲಿ ಬಲುದೂರದ, ಪ್ರಯಾಸದ ದಾರಿಯನ್ನು ಕ್ರಮಿಸಿ ಮೂಲ ಪೆರಿಯ ಬಡಕಾಯಿ ಗಂಗೆಯ ಜಾತ್ರೆಗೆ ಹೋಗುವಾಗ ದಾರಿ ಮಧ್ಯೆ ಜಾತ್ರೆಯ ಆಕರ್ಷಣೆಗಳಾದ ತೆಂಗಿನಕಾಯಿಯ ಕಟ್ಟ,ಸೂಳೆಯರ ಮಿನದನ,
  ದೊಂಬರ ಆಟ,ಅಡಿಕೆಯ ಜೂಜು,
  ಕೋಳಿಯ ಕಟ್ಟ ಕಾಣುತ್ತಾರೆ...

  ಹಾಗೆ ಜಾತ್ರೆಯ ವೈಭವ ನೋಡುತ್ತಾ ಸಾಗಿದ ಮೂಲ ಕುಂಜ್ಞನಾಳ್ವರು ಪೆರಿಯ ಬಡಕಾಯಿ ಗಂಗೆಯ ಮೂಲ ಸಾನಿಧ್ಯವನ್ನು ತಲಪುತ್ತಾರೆ...ಆ ಸಮಯದಲ್ಲಿ ಪೆರಿಯ ಬಡಕಾಯಿ ಗಂಗೆಯ ಜಾತ್ರೆಯ ನಡೆಯುತ್ತಿದೆ..
  ಇವರು ನೋಡುವಾಗ ಸಾನಿಧ್ಯದಲ್ಲಿ ಒಳಾಂಗಣದಲ್ಲಿ ದೇವಬಲಿಯು ನಡೆಯುತ್ತಿದೆ,ಹೊರಾಂಗಣದಲ್ಲಿ ಭೂತಬಲಿಯು ನಡೆಯುತ್ತಿದೆ...
  ಹಾಗೆ ಸ್ವಲ್ಪ ಹೊತ್ತಿನಲ್ಲಿ ಹೊರಾಂಗಣದ ಭೂತ ಬಲಿಯಲ್ಲಿ ಇದ್ದ ದೈವವು ಮೂಲ ಕುಂಜ್ಞನಾಳ್ವರನ್ನು ತನ್ನತ್ತ ಕರೆದು ಅವರಿಗೆ ಸ್ಥಳದ ಮರ್ಯಾದಿಯ
  ತೆಂಗಿನಕಾಯಿಯ ಫಲವನ್ನು ( ಹೇಜ್ಯದ ಫಲ )ನೀಡಿ ಬಾರಗ ಕುಂಜ್ಞನಾಳ್ವರಿಗೆ ಧೈರ್ಯದ ವಾಗ್ಧಾನವನ್ನು ನೀಡುತ್ತ ನೀವಿರುವ ಇದ್ದ ರಾಜ್ಯಕ್ಕೆ ಬರುತ್ತೇನೆ. ಎಂದು ಹೇಳಿತ್ತು...

  ಬರುವ ದೈವವನ್ನು ಬರಬಾರದು ಎಂದು ಹೇಳಲಾರೆ...
  ಬರದ ದೈವವನ್ನು ಬರಬೇಕು ಎಂದು ಹೇಳಲಾರೆ...
  ಆದರೆ ಬರುವ ದೈವದ ಹೆಸರೇನೆಂದು ತಿಳಿದರೆ ಉತ್ತಮವೆಂದು
  ಮೂಲ ಕುಂಜ್ಞನಾಳ್ವರು ಮರು ನುಡಿದರು..
  ಆಗ ದೈವವು ನನ್ನ ಹೆಸರು ಈಗ ಪೊಸಭೂತ ಕುಮಾರನೆಂದು ಆದರೆ ಮುಂದೆ ನಿಮ್ಮ ಮನೆತನದ ಸ್ಥಳ ನಾಮಕದಿಂದ ತುಳುನಾಡಿನಲ್ಲಿ ಪ್ರಬಲಗೊಳ್ಳುತ್ತೇನೆ ಎಂದು ಧೈರ್ಯದ ನುಡಿ ಕೊಟ್ಟಿತ್ತು...

  ಹೀಗೆ ಮಾಯಾ ಸ್ವರೂಪದಿಂದ ಪೆರಿಯ ಬಡಕಾಯಿ ಗಂಗೆಯಿಂದ ಕೊಡಮಣಿಬಾಳಿಕೆಯ ಮೂಲ ಕುಂಜ್ಞನಾಳ್ವರ ಬೆಂಬತ್ತಿ ಬಂದ ಪೊಸಭೂತ ಕುಮಾರನು ಗುಂಡೀರ್,ಕೊಡಂಗೆ,ಕುವೆಜಾಲ ಬರ್ಕೆ,ದೇವಜಾಲ ಬರ್ಕೆ ಎಂಬ ಜೈನಮನೆತನಗಳನ್ನು ದಾಟಿದನು..
  ಅಂಗಾರ ಕರಿಯ,ಬಜಿಲಕಲ್ಲನ್ನು ದಾಟಿ ಮೂಲ ಕುಂಜ್ಞನಾಳ್ವರು ಕೊಡಮಣಿ ಬಾಳಿಕೆಗೆ ಬರುವಾಗ ಮಾಯಾ ಸ್ವರೂಪದಲ್ಲಿ ಕೊಡಮಣಿ ಬಾಳಿಕೆಯನ್ನು ಪ್ರವೇಶಿಸಿದನು...

  ಮಾಯೆಯಲ್ಲಿ ಬಂದ ದೈವವನ್ನು ಜೋಗದಲ್ಲಿ ಕೊಡಮಣಿ ಬಾಳಿಕೆಯ ಮನೆಯ ತೆಂಕಣ ದಿಕ್ಕಿನಲ್ಲಿ
  ನಾಲ್ಕು ಕಂಬದ ಹದಿನಾರು ಕೋಲು ಉದ್ದದ ಸ್ಥಾನ ಚಾವಡಿ ಕಟ್ಟಿಸಿ
  ಕಂಚಿಯ ಮಂಚ,ಹಿಡಿಯಲು ಕಂಚಿಯ ಹುಲಿ,
  ಕುಳಿತುಕೊಳ್ಳಲು ಕಂಚಿಯ ಹುಲಿ ಹೀಗೆ ಸರ್ವ ಬಿರ್ದಾವಳಿ ಒಪ್ಪಿಸಿ ಮಂಚದ ಮೇಲೆ ಮಂಚ ಇಟ್ಟು
  ಬೀರ್ನಾಳ್ವರ ಮುಖಾಂತರ
  ( ದೈವದ ಪ್ರಥಮದ ಮುಕ್ಕಾಲ್ದಿ ~ ಬೀರ್ನಾಳ್ವರು)
  ಪ್ರಥಮದ ಬಲಿಭೋಗವನ್ನು ಮೂಲ ಕುಂಜ್ಞನಾಳ್ವರು ಒಪ್ಪಿಸಿಕೊಟ್ಟರು..

  ಆಗ ದೈವವು ಮೂಲ ಕುಂಜ್ಞನಾಳ್ವರಲ್ಲಿ
  ಕೊಡಮಣಿ ಬಾಳಿಕೆಯ ಬಾರಗರೇ
  ನೀವು ಕೊಟ್ಟಂತಹ ಬಲಿಭೋಗದಿಂದ ಸಂತುಷ್ಟನಾಗಿದ್ದೇನೆ...
  ಇನ್ನು ಮುಂದೆ ನಾನು ಕೊಡಮಣಿ ಬಾಳಿಕೆಯ ದೈವ ಕೊಡಮಣಿತ್ತಾಯ ನಾಗಿ ರಾಜ್ಯಧಿಕಾರಕ್ಕೆ ಇಳಿಯುತ್ತೇನೆಂದಿತು....

  ಹೀಗೆ ದೈವವು ಪೆರಿಂಜೆಯ ಪಡ್ಯೋಡಿ ಗುತ್ತಿನ ಜಂತ್ರಮಲೆ ಬಾಕ್ಯಾರಿನಲ್ಲಿ ತನ್ನ ಮಾಯಾ ಲೀಲೆಯನ್ನು ತೋರ್ಪಡಿಸಿತು...
  ಹಾವು ಮುಂಗುಸಿಯ ಆಟ,,,
  ದನದ ಹುಲಿಯ ಸ್ನೇಹದ ಮಾಯಾಚಿತ್ತವನ್ನು ರಾಜ್ಯಕ್ಕೆ ಗೋಚರ ಹುಟ್ಟಿಸಿತು...
  ಕಾಡಿನಲ್ಲಿ ದೊಡ್ಡಹುಲಿ
  ಊರಿನಲ್ಲಿ ದೊಡ್ಡಬಲಿಪ ಕಾಣಿಸಿತು..
  ಇದು ಎಂತಹ ಕಲಿಯುಗದ ವೈಚಿತ್ರ್ಯವೆಂದು ಗ್ರಾಮಸ್ಥರು,ಗುತ್ತು ಬಾರಗರು ಸೇರಿ ಅಲೆವೊಲಿ ಪಂಚಾಂಗ ರಾಶಿಪ್ರಶ್ನೆಯಲ್ಲಿ ನೋಡುತ್ತಾರೆ..
  ರಾಶಿಪ್ರಶ್ನೆಗೆ ಮಾರೂರು ಖಂಡಿಗೆಯ ಚಾವಡಿಯ ಅಸ್ರಣ್ಣರನ್ನು ಕರೆಸುತ್ತಾರೆ.. ಅವರು ರಾಶಿಹಾಕಿ ನೋಡುವಾಗ ಹೇಳುತ್ತಾರೆ,,
  ಕಾಡಿನಲ್ಲಿ ದೊಡ್ಡಹುಲಿ,ಊರಿನಲ್ಲಿ ದೊಡ್ಡ ಬಲಿಪ ಬೇರೆಯೇನೂ ಕಲಿಯುಗ ಮಹಾತ್ಮೆಯಲ್ಲ...
  ಪೆರಿಯ ಬಡಕಾಯಿ ಗಂಗೆಯಿಂದ ಕೊಡಮಣಿ ಬಾಳಿಕೆಯ ಮೂಲ ಕುಂಜ್ಞನಾಳ್ವರ ಬೆಂಬತ್ತಿ ಬಂದ ಪೊಸಭೂತ ಕುಮಾರನೆಂಬ ಶಕ್ತಿಯು ಕೊಡಮಣಿ ಬಾಳಿಕೆಯಲ್ಲಿ ಕೊಡಮಣಿತ್ತಾಯನಾಗಿ ಮೆರೆಯುತ್ತಿದ್ದಾನೆ...
  ಅವನು ಈಗ ರಾಜ್ಯಾಧಿಕಾರ ಪಡೆದು ರಾಜನ್ ದೈವವಾಗಿ ಮೆರೆಯುವ ಇಚ್ಛೆಯಲ್ಲಿದ್ದಾನೆ ...
  ಅವನ ಮಾಯಾಚಿತ್ತವೇ ಈ ಎಲ್ಲಾ ಮಾಯಾ ವೈಚಿತ್ರ್ಯಕ್ಕೆ ಕಾರಣ ಅವನ್ನು ರಾಜ ಮರ್ಯಾದಿಯಲ್ಲಿ ನಂಬಿದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರು...
  ಅವರ ಮಾತಿಗೆ ಗ್ರಾಮಸ್ಥರು,,ಗುತ್ತು ಬಾರಗರು ಸಮ್ಮತಿಸಿ ಪ್ರಥಮದಲ್ಲಿ ಬೇಟೆಯಾಗಬೇಕೆಂದು ಕೊರಳಾಯ ಪಾಣ ಹಾಕಿಸಿ,ಕಾಡಿಗೆ ಅಡ್ಡಕಟ್ಟಿ ನಡುಮಲೆ ಕಾಪಿನಲ್ಲಿ ಹುಲಿ ಬೇಟೆಯಾಡಿದರು ...ಆದರೂ
  ಪೂರ್ವಕ್ಕೆ ಅಟ್ಟುವಾಗ ಸಾವಿರ ಹುಲಿ
  ಪಶ್ಚಿಮಕ್ಕೆ ಅಟ್ಟುವಾಗ ಸಾವಿರ ಹುಲಿ ಆಡಿದ ಬೇಟೆ ಫಲಪ್ರಧವಾಗಲಿಲ್ಲ...

  ಮುಂದಕ್ಕೆ ಪೆರಿಂಜೆಯ ಐದು ಗ್ರಾಮ ಒಂದು ಮಾಗಣೆ ಸೇರಿ ನಡ್ಯೋಡಿ ಗುತ್ತು ಪೂಪಾಡಿಕಲ್ಲ್ ದಾಟಿ ಮುರಕೊಳ ಎಂಬಲ್ಲಿ
  ಮನಪೋಯಿ ದೊಂಪ,
  ಮಿತ್ರಪೋಯಿ ದೊಂಪ ಎಂಬ ಎರಡು ವಿಧದ ಚಪ್ಪರ ಹಾಕಿಸಿ ಪ್ರಥಮದ ದೊಂಪದಬಲಿ ( ಚಪ್ಪರದ ಬಲಿನೇಮ )
  ನೀಡಿದರು...
  ಅದರಲ್ಲಿ ತನಗೆ ಮಿತ್ರಪೋಯಿ ದೊಂಪ ಒಪ್ಪಿಗೆ ಎಂದು ದೈವ ಕೊಡಮಣಿತ್ತಾಯನು ನುಡಿ ಕೊಟ್ಟನು...
  ಮುಂದಕ್ಕೆ ಪೆರಿಂಜದ ಪಡ್ಯೋಡಿಗುತ್ತು ಭಂಡಾರದ ಮನೆ ಎಂದು ನಿರ್ಣಯಿಸಿ ಪೆರಿಂಜೆ ಪಡ್ಯಾರಬೊಟ್ಟದ ಏರಿಕೆಯ ಗಿರಿಯಲ್ಲಿ ನಾಲ್ಕು ಕಂಬದ ಹದಿನಾರು ಕೋಲು ಉದ್ದದ ಚಾವಡಿ,, ಒಂದು ಕಂಬದ ಒಂಭತ್ತು ಕೋಲು ಉದ್ಧದ ಅರಸು ಮರ್ಯಾದಿದ ಮಾಡ ಕಟ್ಟಿಸಿ ಆನೆಪಲ್ಲಕ್ಕಿ,,ಅರಸುಕೊಡೆ,,
  ತಾಳೆ ಗರಿಯ ಕೊಡೆ,, ಪಂಚದೀವಟಿಗೆ,
  ಕೋಲುದೀವಟಿಗೆ,ಧ್ವಜಸ್ತಂಭ,, ಗರಡೆ,ಪಟ್ಟಸಿಂಹಾಸನ,ಬಸವ, ಬಲಿಮೂರ್ತಿ ಉತ್ಸವ ರಥೋತ್ಸವ ,ಆಯುಧಮಣಿ,,
  ಗೆಂದಅಡ್ಡಣ,ಬಾಲ್ ಚವಲ,,
  ಬಲಿಪ,ಹುಲಿಯನ್ನು ಒಪ್ಪಿಸಿ ಸುಗ್ಗಿ ತಿಂಗಳಲ್ಲಿ ಮೂರು ಹೋಗುವ ದಿನಮಾನದಂದು ವೈಭೋಗದ ಬಲಿನೇಮವನ್ನು
  ಪೆರಿಂಜಪಡ್ಯಾರಬೊಟ್ಟದಲ್ಲಿ ರಾಜ್ಯ ಒಪ್ಪಿಸಿಕೊಟ್ಟರು....

  ಹೀಗೆ ಪೆರಿಂಜ ಪಡ್ಯಾರಬೊಟ್ಟದಲ್ಲಿ ನೆಲೆಯಾದ
  ಅರಸು ಬಿರುದಿನ ಪೆರಿಂಜಮಾರೂರಿನ ದೈವ
  ಪೆರಿಂಜಮಾರ ಸತ್ಯ
  ಧರ್ಮದೈವವಾಗಿ
  ತುಳುನಾಡಿನಾದ್ಯಂತ ಅರಸು
  ಚಾವಡಿಗಳಲ್ಲಿ ನೆಲೆನಿಂತು
  ಅರಸುದೈವವಾಗಿ
  ಗುತ್ತು ಚಾವಡಿಗಳಲ್ಲಿ
  ಗುತ್ತುದೈವವಾಗಿ
  ಗ್ರಾಮಕ್ಕೆ ಗ್ರಾಮದೈವವಾಗಿ,
  ರಾಜ್ಯಕ್ಕೆ ರಾಜನ್ ದೈವವಾಗಿ
  ಮಾಗಣೆಗೆ ಮಾಗಣೆದೈವವಾಗಿ ,
  ಸೀಮೆಗೆ ಸೀಮೆದೈವವಾಗಿ
  ತುಳುನಾಡಿನ
  ತೆಂಕಣ ನೀಲೇಶ್ವರ ಗಡಿಯಿಂದ
  ಬಡಗಣ ಬಾರ್ಕೂರ ಗಡಿವರೆಗೆ
  ಮೂಡಣ ಘಟ್ಟ ಪ್ರದೇಶದಿಂದ
  ಪಡುವಣ ಕಡಲ ಕಿನಾರೆವರೆಗೆ ರಾಜ್ಯ ಸ್ಥಾನ ನಿರ್ಮಿಸಿ
  ಅಪ್ರತಿಮ,ಮಹಾಪ್ರಾಬಲ್ಯದ ಅರಸು ದೈವವಾಗಿ ತನ್ನ ಕಲೆಕಾರ್ಣಿಕವನ್ನು ಮೆರೆಯುತ್ತಿದ್ದಾನೆ...

  ನನಗೆ ಮೂರು ತಕ್ಕಣದ ಆಯುಷ್ಯದ ಎಣ್ಣೆಯನ್ನು ನೀಡಿ ತುಳುನಾಡಿನಲ್ಲಿ ಅವನ ಮುಕ್ಕಾಲ್ದಿಯಾಗಿ ಸೇವೆಗೈಯುವ ಮಹಾಯೋಗವನ್ನು ನೀಡಿದ
  ಆ ಧರ್ಮದೈವ ಪೆರಿಂಜಮಾರ ಸತ್ಯ ರಾಜನ್ ದೈವ ಕೊಡಮಣಿತ್ತಾಯರಿಗೆ ಸಾವಿರ ಸಾವಿರ ನಮನಗಳು....

  ✍,,ಅಭಿಲಾಷ್-ಚೌಟ ಕೊಡಿಪಾಡಿಬಾಳಿಕೆ ಸುರತ್ಕಲ್.

  ( ಶ್ರೀಕೊಡಮಣಿತ್ತಾಯ ದೈವದ ಮುಕ್ಕಾಲ್ದಿ ಶ್ರೀಕ್ಷೇತ್ರ ಮಿಜಾರು )

 • 0 comments