Related Notes

Tulunada Daivolu » Notes » ಕೊರಗ ತನಿಯ - Koraga Thaniya

 • ಕೊರಗ ತನಿಯ - Koraga Thaniya

  Posted by Sathish Agpala August 30, 2017 - Category: Other - 842 views - 0 comments - 0 likes - #daivolu  #ಕೊರಗ ತನಿಯ  #Koraga Thaniya 
  ಕೊರಗ ತನಿಯ - Koraga Thaniya

  #ಪಣಂಬೂರು ಪಟ್ಟಸಾಲೆಯಲ್ಲಿ “ಓಡಿ” ಮತ್ತು ಅವನ ಹೆಂಡತಿ ‘ಅಚ್ಚುಮೈರೆ’ ಎಂಬವರು ಇದ್ದರು. ಅವರಿಗೆ ‌ಒಬ್ಬ ಮಗ ‘ತನಿಯ’. ತನಿಯ‌ ಮೂವತ್ತು ದಿನದ ಮಗುವಾಗಿದ್ದಾಗಲೆ ತಾಯಿ ತೀರಿಕೊಂಡಿದ್ದಳು. ಆ ಬಳಿಕ ತಂದೆಯೂ ತೀರಿಹೋದನು. ಹೀಗೆ ಕೊರಗರ ತನಿಯನಿಗೆ ಹಿಂದೆ ಮುಂದೆ ಗತಿಗೋತ್ರ ಇಲ್ಲವಾಯಿತು. ಅವನ ವಂಶದವರಾದ ಏಳು ಕೊಪ್ಪದ ಕೊರಗರು ಅಳಿಗುಳಿಯಾಗಿ ಹೋದರು.

       ಎಳೆಯ ಬಾಲಕ ಏಳು ‌ಕೊಪ್ಪದ ಡೋಲನ್ನು ಒಂದು ‌ಕಡೆ ತೂಗು ಹಾಕಿದ. ನಟ್ಟಿರುಳ ಜಾವದ ಹೊತ್ತಿಗೆ ತನಿಯನು ಕೊಪ್ಪದಿಂದ ಇಳಿದು ಊರು ಬಿಟ್ಟು ಹೊರಟನು. ಹೀಗೆ ‌ಒಂದು ಕಲ್ಲಾಪುವಿನ ಗಡಿಗೆ ಬಂದು‌ ಮುಟ್ಟಿದನು. ಆಗ ಬೆಳ್ಳಿ ‌ಮೂಡಿತು, ಬೆಳಕು ಹರಿಯಿತು. ಮೂಡುದಿಕ್ಕಿಗೆ ಮುಖ ಮಾಡಿ ದೇವರಿಗೆ ಕೈ ಮುಗಿದನು. ಈ ರೀತಿಯಲ್ಲಿ ತನಿಯನು ನೋಡುವಾಗ ದೇವರ ದಯೆಯಿಂದ ಅವನ ಮುಂಭಾಗದಲ್ಲಿ ಬೈದರ ಜಾತಿಯ ‘ಮೈರಕ್ಕೆ’ ಇದ್ದಳು. ಅವಳ ಜೊತೆಗೆ ಮಗ ಚೆನ್ನಯ ಇದ್ದನು. ತಾಯಿ ಮತ್ತು ಮಗ ಕಳ್ಳು ಹೊತ್ತು ತರುತ್ತಿದ್ದರು.

     ಕೊರಗರ‌ ತನಿಯ‌ ಓಡಿ ಹೋಗಿ ಅವರ ದಾರಿಗಡ್ಡಲಾಗಿ ನಿಂತನು. ಮೈರಕ್ಕೆ ಬೈದೆದಿ ಇದ್ದನ್ನು ನೋಡಿದಳು. ” ಯಾರು ಮಗಾ ನೀನು? ದಾರಿ ಬಿಟ್ಟು ಪಕ್ಕಕ್ಕೆ ಹೋಗು” ಎಂದಳು. ಹುಡುಗ ಒಮ್ಮೆ‌ ಅಳುವನು,  ಒಮ್ಮೆ‌ ನಗುವನು. ಆಗ ತನಿಯನು ಮೈರಕ್ಕೆಯೊಡನೆ “ನೀವು ದಾರಿ ಬಿಡಲು ಹೇಳಿದಿರಿ. ನನ್ನ ಅವಸ್ಥೆ ‌ನೋಡಿ. ಸೊಂಟಕ್ಕೆ ‌ಸುತ್ತಿಕೊಳ್ಳಲು‌ ತುಂಡು ಬಟ್ಟೆಯಿಲ್ಲ ಉಡಲೊಂದು ತುಂಡು ಬಟ್ಟೆ ‌ಕೊಡಿ ತಾಯಿ” ಎಂದನು. ಅದನ್ನು ಕೇಳಿ ಮೈರಕ್ಕೆ ಬೈದೆದಿ, ಮಗ ಚೆನ್ನಯನ ತಲೆಯ ಮೇಲಿದ್ದ ಕಳ್ಳಿನ ‘ಕಡ್ಡೆ’ಯನ್ನು ಕೆಳಗಿಳಿಸಿದಳು. ಅವನ ತಲೆ‌ ಮೇಲೆ‌ ಸುತ್ತಿದ್ದ ಬಟ್ಟೆಯನ್ನು ತೆಗೆದಳು. ಅದನ್ನು ತನಿಯನಿಗೆ‌ ಕೊಟ್ಟಳು.  ತನಿಯನು ಆ ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಂಡನು. ಬಳಿಕ ಮರೆಯಿಂದ ಹೊರಬಂದನು.

           “ಎಲ್ಲಿಂದ‌ ಬಂದೆ ಮಗಾ? ನೀನು ಯಾವ ಕಡೆ ಹೋಗುವವನು?” ಎಂದು ಕೇಳಿದಳು ಮೈರಕ್ಕೆ. ಆಗ ತನಿಯನು “ಅಮ್ಮಾ ನಾನು ಪಣಂಬೂರು ಪಟ್ಟಸಾಲೆಯಿಂದ ಬಂದೆ. ನನ್ನ ತಾಯಿ ತಂದೆ ಇಬ್ಬರು ತೀರಿಕೊಂಡರು. ನನ್ನ ವಂಶದರಾದ ಏಳು ಕೊಪ್ಪದ ಕೊರಗರು‌ ಕೂಡ ಅಳಿದು‌ ಹೋದರು. ಹಾಗಾಗಿ ನಾನು ದಿಕ್ಕಿಲ್ಲದೆ ದೇಶಂತರ ಹೊರಟು ಬಂದೆ. ಮಾಡಲು ‌ಒಂದು ಕೆಲಸ, ಹೊಟ್ಟೆ ತುಂಬಿಕೊಳ್ಳಲು ಒಂದು ಹಿಡಿ‌ ಗಂಜಿ ಇಷ್ಟು ಸಿಗುವ ಊರನ್ನು ಹುಡುಕಿಕೊಂಡು ಹೊರಟವ ನಾನು” ಎಂದ.

       “ಹಾಗೆ ದೇಶಾಂತರ ಹೊರಟವನಾದರೆ ನನ್ನ ಜೊತೆ ಬರುತ್ತೀಯಾ ಮಗಾ?” ಎಂದು ಮೈರಕ್ಕೆ ಕೇಳಿದಳು. ಅದನ್ನು ಕೇಳಿ ತನಿಯನು- “ನೀವು ನನ್ನನ್ನು ನೋಡಿಕೊಳ್ಳುವಿರಾದರೆ  ಚಿಂತೆಯಿಲ್ಲ ಖಂಡಿತವಾಗಿ ಬರುತ್ತೇನೆ” ಎಂದ. ಆಗ ಮೈರಕ್ಕೆ “ನೀನು ಚಿಂತಿಸಬೇಡ ನನಗೆ ಇಬ್ಬರು ಮಕ್ಕಳಿದ್ದಾರೆ. ನೀನು ಸೇರಿ ಮೂವರು ಮಕ್ಕಳು “ಎಂದಳು.

  ಅವಳು ಚೆನ್ನಯನನ್ನು ಕರೆದಳು. “ಮಗ‌ ಬುತ್ತಿ ಬಿಚ್ಚು, ಒಂದು ಪಾಲು ತನಿಯನಿಗೆ ಕೊಡು” ಎಂದಳು. ತನಿಯನಿಗೆ ‌ಅನ್ನವನ್ನು‌ ಉಣಿಸಿದರು. ಕಳ್ಳಿನ ಕೊಡವನ್ನು ಹೊರಿಸಿದರು ಮನೆ ಕಡೆ ಹೊರಟರು ಆಗ‌ ಮನೆಯಲ್ಲಿದ್ದ ಅತ್ತು ಬೈದದಿ ಇವರನ್ನು ನೋಡಿದಳು. “ನನ್ನ ತಾಯಿ ‌ಮತ್ತು ಅಣ್ಣ ಇಬ್ಬರೇ ಹೋದವರು. ಈಗ‌ ಮೂರು ಜನ ಬರುತ್ತಿದ್ದಾರೆ” ಎಂದಳು. ಅವರು ಮನೆಗೆ ಬಂದಗ ಅತ್ತು ತಾಯಿಯೊಡನೆ ಹುಡುಗನ ಬಗ್ಗೆ ವಿಚಾರಿಸಿದಳು. ” ಇವ ಕಲ್ಲಾಪುನ ( ಕಲ್ಲಿನ ಪಾಪು) ಗಡಿಯಲ್ಲಿ ಸಿಕ್ಕಿದ. ಹೊರಗಿನ ಕೆಲಸಕ್ಕೆ ಆದೀತು ಎಂದು ಕರೆದು ತಂದೆ. ಅವನಿಗೂ ತನ್ನವರೆಂಬ ದಿಕ್ಕು ದೆಸೆ ಇಲ್ಲ. ಅವನನ್ನು‌ ನಾವೆ ಚೆನ್ನಾಗಿ ಸಾಕಿಕೊಂಡು ಬರಬೇಕು ”  ಎಂದಳು.

  ತನಿಯ ದೈವದ ಅನುಗ್ರಹ ‌ಇದ್ದ ಕಾರ್ನಿಕದ‌ ಹುಡುಗ. ಹಾಗಗಿ ಏಳು ರಾತ್ರಿ ಎಂಟು ಹಗಲು ‌ಮಾರಿದರೂ ಜಾಡಿಯ‌ ಕಳ್ಳು ಮುಗಿಯಲ್ಲಿಲ್ಲ. ತಾಯಿ ಮೈರಕ್ಕೆ ಇದನ್ನು ಕಂಡು ಬಹಳ ಅಚ್ಚರಿ ಪಟ್ಟಳು. ತನಿಯ‌ ತಂದ‌ ಕಳ್ಳು ಮಾರಿ‌ ಮುಗಿದರೆ ಕದಿರೆಯ‌ ದೇವಸ್ಥಾನಕ್ಕೆ ಕಂಚಿನ ಹೊದಿಕೆ‌ ಹೊದಿಸುತ್ತೇನೆ‌ ಎಂದು ಹರಕೆ‌ ಹೊತ್ತಳು. ಮೈರಕ್ಕೆ ಹೇಳಿದ ಹರಿಕೆಯ‌ ಮಾತು,  ಅವಳ‌ ನಾಲಿಗೆ ಗಂಟಲಲ್ಲಿ ಇಳಿಯುವಾಷ್ಟರಲ್ಲಿ ದೊಡ್ಡ ‌ಮಣ್ಣೀನ ಮಂಡೆಯಲ್ಲಿದ್ದ ಕಳ್ಳು ಮಾರಿ ಹೋಯಿತು.

         ಮಗ ತನಿಯನನ್ನು‌ ಪ್ರೀತಿಯಿಂದ ಸಾಕಿದಳು‌ ಮೈರಕ್ಕೆ‌‌ ಬೈದೆದಿ. ” ಮಗಾ ಚೆನ್ನಯಾ, ‘ನೆಡಿಲ್’ನ‌ ಕೋಲುಗಳನ್ನು ಕಡಿದು‌ ತಾ. ತನಿಯನಿಗೆ ‌ಒಂದು‌ ಕೊಟ್ಟಿಗೆಯನ್ನು ಕಟ್ಟು” ಎಂದಳು. ಅಡಕೆ‌ ತೋಟಕ್ಕೆ ಹೋಗು ಒಂದು ಒಣಗಿದ ಹಾಳೆಯನ್ನು ತಂದು‌ ಅವನಿಗೆ‌ ಒಂದು “ಕೊಂಬರು”(ಶಿರಸ್ತ್ರಾಣ) ತಯಾರಿಸಿ ಕೊಡು‌ ಎಂದಳು‌ ತಾಯಿ. ಹೀಗೆ‌ ತನಿಯ‌ ಕೊಟ್ಟಿಗೆಯಲ್ಲಿ ಉಳಕೊಂಡು ಒಡತಿಯ‌ ಮನೆಯ‌ ಹೊರ‌ ಕೆಲಸಗಳನ್ನು‌ ಮಾಡಿಕೊಂಡು ‌ಇದ್ದ.

         ಈ ರೀತಿ ತನಿಯ‌ ಬೆಳೆದು‌ ದೊಡ್ಡವನಾದ. ಅವನು ಒಂದು ದಿನ ತಾಯಿ ಮೈರಕ್ಕೆ‌ ಬೈದೆದಿಯನ್ನು ಕರೆದ. “ಅಮ್ಮಾ ನನಗೊಂದು ‘ಪಿಂಪಿಲಿ ಕತ್ತಿ’ (ಹರಿತವಾದ ಸಣ್ಣ ಕತ್ತಿ)ಯನ್ನು ಕೊಡಿ‌. ನನ್ನ ಕುಲದ‌ ಕಸುಬನ್ನು ಮಾಡುತ್ತೇನೆ” ಎಂದನು.

  ತಾನು ಕದಿರೆಯ‌ ದೇವಸ್ಥಾನಕ್ಕೆ ಸಾವಿರ‌ ಬುಟ್ಟಿ ಹರಕೆ ಹೇಳಿಕೊಂಡಿದ್ದೇನೆ. ಬುಟ್ಟಿ ಮಾಡಿ ಹರಕೆ ಸಂದಾಯ ಮಾಡಬೇಕು ಎಂದನು. ಅದನ್ನು ಕೇಳಿ ಚೆನ್ನಯನು ಒಂದು ಕತ್ತಿಯನ್ನು ಮಾಡಿಸಿ ಕೊಟ್ಟನು.

        ತನಿಯನು ಕಾಡಿಗೆ ಹೋಗಿ ರಾಶಿ ರಾಶಿ ಬೀಳಲುಗಳನ್ನು ಕಡಿದನು. ಅದನ್ನು ಹೊತ್ತು ತಂದು ಮನೆಯ ಮುಂದೆ ರಾಶಿ ಹಾಕಿದನು. ಬೀಳಲನ್ನು ಚೆನ್ನಾಗಿ ಸೀಳಿ ನುಣುಪುಗೊಳಿಸಿದನು ರಾತ್ರಿ ಹಗಲೆನ್ನದೆ ಸಾವಿರ‌ ಕೈ ಬುಟ್ಟಿಗಳನ್ನು‌ ಹೆಣೆದನು. ಸಾವಿರ ಬುಟ್ಟಿಗಳನ್ನು ದೇವರ ಭಂಡಾರಕ್ಕೆ ಒಪ್ಪಿಸಿದ.

         ಒಂದು ದಿನ ಮೈರಕ್ಕೆ ತನಿಯನನ್ನು ಕರೆದು “ಮಗಾ, ನನಗೆ ಕದಿರೆಯ ದೇವಸ್ಥಾನಕ್ಕೆ ಏಳು ಹೊರೆಯನ್ನು ಕೊಂಡು ಹೋಗಲಿಕ್ಕಿದೆ. ಅದಕ್ಕಾಗಿ ಏಳು ಮೂಟೆ ಹೊರಲು ಏಳು ಆಳುಗಳನ್ನು ಕರೆದುಕೊಂಡು ಬಾ” ಎಂದಳು. ಅದನ್ನು ಕೇಳಿದ ತನಿಯನು “ಅಮ್ಮಾ ಏಳು ಆಳುಗಳನ್ನು ಕರೆಯುವುದು ಬೇಡ. ಏಳು ಹೊರೆಗಳನ್ನು ನಾನೊಬ್ಬನೇ ಹೊರಬಲ್ಲೆ. ಏಳು ಜನರ ಊಟ, ಎಲೆ- ಅಡಿಕೆ ಮತ್ತು ಏಳು ಕುಪ್ಪಿ ಕಳ್ಳನ್ನು ನನಗೆ‌ ಕೊಡಿ” ಎಂದ. ಆತನ ಮಾತುಗಳನ್ನು ಕೇಳಿದ ಮೈರಕ್ಕೆ ಬೈದೆದಿ ತನಿಯ ಹೇಳಿದಂತೆ‌‌ ಎಲ್ಲವನ್ನು ಕೊಟ್ಟಳು. ತನಿಯ ಸಂತೋಷ ಪಟ್ಟನು. ಅವನು ಚೆನ್ನಯ ಬೈದನಲ್ಲಿ ಏಳು ಜನರ ತಲೆಹೊರೆಯನ್ನು ಒಂದು ಮಾಡಿ ಕಟ್ಟಲು  ಹೇಳಿದ. ತನಿಯ‌ ಆ ಕಟ್ಟನ್ನು ತಾನೊಬ್ಬನೇ ಹೊತ್ತುಕೊಂಡು ಕದಿರೆಯ‌ ದೇವಸ್ಥಾನಕ್ಕೆ ಹೋದನು. ದೇವಸ್ಥಾನದ ಹೊರಗಡೆ ನಿಂತುಕೊಂಡು ತಲೆ ಹೊರೆಯನ್ನು ‌ಒಳಗೆ‌ ಎಸೆದನು.

       ತನಿಯನು ಆ ಕಡೆ ನೋಡುವಾಗ ದೇವಸ್ಥಾನದ ಮಾಡಿಗೆ ಮಾದಳದ ಹಣ್ಣೊಂದು ಮರದಿಂದ ಬಾಗಿ ನೇಲುತ್ತಿತ್ತು. “ನನ್ನ ತಾಯಿಗೆ ಮಾದಳದ ಹಣ್ಣು ಬಹಳ ಪ್ರೀತಿ” ಎಂದು ಕೊಯ್ಯಲು ಆಸೆಯಿಂದ ಗೋಪುರದ ‌ಮೇಲೆ ಕಾಲಿಟ್ಟನು. ಆ ಹಣ್ಣಿಗೆ ಕೈ ಕೊಡುವಾಗ ದೇವರ ಕಾರ್ನಿಕದಿಂದ ಕೊರಗರ‌ ತನಿಯ ಅಲ್ಲೆ ಮಾಯವಾದನು.

          ಆ ಬಳಿಕ ‘ಕೊರಗ ತನಿಯ’ ಎಂಬ ಶಕ್ತಿಯಾಗಿ ತುಳುನಾಡಿನಲ್ಲಿ ನಂಬಿಕೊಂಡು ಬರಲು ಪ್ರಾರಂಭಿಸಿದರು.
  Source:Whatsapp Group- Tulunada Daivaradhane Porlu • 0 comments