ಶ್ರೀ ಅಮೃತದೇವ ಕಟ್ಟಿನಕೆರೆ
(ಬಡಗು ತಿಟ್ಟು ಭಾಗವತಿಕೆ ಚೆಂಡೆ ಗುರುಗಳು )
ಅಮೃತದೇವ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಟ್ಟಿನಕೆರೆ ಗ್ರಾಮದವರು. ಬಾಲ್ಯದಲ್ಲೇ ಯಕ್ಷಗುರುಗಳಾದ ಅಶೋಕ ಭಟ್ ಇವರಲ್ಲಿ ಹೆಜ್ಜೆಗಾರಿಕೆಯನ್ನು ಶಾಸ್ತ್ರೋಕ್ತವಾಗಿ ಕಲಿತು ವೃಷಸೇನ ಕಾಳಗದ ಕೃಷ್ಣನ ಪಾತ್ರದಲ್ಲಿ ರಂಗವೇರಿದರು. ನಂತರ ಸ್ವ ಇಚ್ಛೆಯಿಂದ ಚಂಡೆವಾದನ ಮತ್ತು ಭಾಗವತಿಕೆ ಕಲಿತು ಹವ್ಯಾಸಿ ಕಲಾವಿದರಾಗಿ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಭಾಗವಹಿಸತೊಡಗಿದರು. ಬೆಳೆಯೂರು ಮತ್ತು ಭುವನಗಿರಿ ಮೇಳದಿಂದ ಆರಂಭಿಸಿ ಬಡಗಿನ ಸಾಧಾರಣವಾಗಿ ಎಲ್ಲಾ ಮೇಳಗಳಲ್ಲೂ ಹವ್ಯಾಸಿ ಕಲಾವಿದರಾಗಿ ಭಾಗವಹಿಸಿದ್ದಾರೆ. ಕಾಲೇಜು ದಿನಗಳಲ್ಲಿ ತೆಂಕು ತಿಟ್ಟಿನ ಅಭ್ಯಾಸ ಮಾಡಿ ಅಲ್ಲೂ ಕೂಡ ಹಲವಾರು ಪಾತ್ರ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಉದ್ಯೋಗದಲ್ಲಿರುವ ಇವರು ಸ್ನಾತಕೋತ್ತರ ಪದವೀಧರರು.