Sathish Agpala's Album: Wall Photos

Photo 103 of 117 in Wall Photos

#ಯಕ್ಷಗಾನ ನಭೋಮಂಡಲದ ಪೂರ್ಣಚಂದ್ರ : ಯಕ್ಷ ಗಾರುಡಿಗೆ ಅಕ್ಷರ ನಮನ

ಉದಯವಾಣಿ..
ಕನ್ನಡ ಜನ ಮಾನಸದಲ್ಲಿ ಬಹುಪ್ರಿಯರಾಗಿ ಜನ ಮನ್ನಣೆಯ ಸನ್ಮಾನಗಳನ್ನು ಅತಿ ಹೆಚ್ಚು ಪಡೆದವರು ಯಾರಿರಬಹುದು. ಎಂಬ ಕುತೂಹಲದ ಪ್ರಶ್ನೆಯೊಂದು ನನ್ನಲ್ಲಿತ್ತು. ಸಿನಿಮಾ ಮಂದಿ, ರಾಜಕಾರಣಿಗಳು, ಕಲಾವಿದರು, ಕವಿಗಳು, ಜಾನಪದರು ಹೀಗೆ ಪಟ್ಟಿ ಮಾಡುತ್ತಾ ಹೋದಂತೆ ನನ್ನಲ್ಲಿ ಹುಡುಕಿಕೊಂಡ ಉತ್ತರ ಇದು. ಯಕ್ಷಗಾನ ಕ್ಷೇತ್ರದಲ್ಲಿ ಕಳೆದ ಆರು ದಶಕಗಳಿಂದ ಸತತ ತಾರಾ ಪಟ್ಟವನ್ನು ಕಾಯ್ದು ಕೊಂಡಿರುವ ಕನ್ನಡ ಸಿನಿಮಾ ರಂಗದ ಮೇರು ಕಲಾವಿದರಾಗಿದ್ದ ಡಾ|| ರಾಜಕುಮಾರ್, ಉದಯ ಕುಮಾರ್ ಮೊದಲಾದ ಮಹಾನೀಯರಿಂದ ಹೃದಯ ಸ್ಪರ್ಶಿ ಸನ್ಮಾನಗಳನ್ನು ಸ್ವೀಕರಿಸಿದ, ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ, ದೇಶ ವಿದೇಶಗಳಲ್ಲಿ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ನಿರಂತರ ಐವತ್ತು ಅರವತ್ತು ವರ್ಷಗಳಿಂದ ಜನರಿಂದ ಸತತ ಸನ್ಮಾನಗಳನ್ನು ಪಡೆಯುತ್ತಲೇ ಇರುವ ಚಿಟ್ಟಾಣಿ ರಾಮಚಂದ್ರ ಹೆಗಡೆಯವರೇ ಈ ವ್ಯಕ್ತಿ.

ಎಪ್ಪತ್ತೇಳರ ಹರಯದಲ್ಲೂ ಕೀಚಕನಾಗಿ, ಭಸ್ಮಾಸುರನಾಗಿ, ಕೌರವನಾಗಿ, ದುಷ್ಟಬುದ್ಧಿಯಾಗಿ, ರುದ್ರಕೋಪನಾಗಿ, ಹೆಚ್ಚೇನು ಕಾಳಿದಾಸದ ಕಲಾಧರನಾಗಿ ರಂಗಸ್ಥಳಕ್ಕೆ ಬಂದರೆ ಸಹಸ್ರ ಸಹಸ್ರ ಸಂಖ್ಯೆಯ ಪ್ರೇಕ್ಷಕ ಸಮುದಾಯ ಬೆಕ್ಕಸ ಬೆರಗಾಗುತ್ತದೆ. ನಾಟ್ಯ, ಅಭಿನಯ, ವೇಷ ಎಂಥವರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ. ಕರಾವಳಿ, ಮಲೆನಾಡಿನ ಜನರ ಮೇಲಷ್ಟೇ ಈ ಪರಿಣಾಮವಲ್ಲ. ಇಡೀ ದೇಶದ ಯಾವುದೇ ಭಾಗದಲ್ಲೂ, ವಿದೇಶಗಳಲ್ಲೂ ತನ್ನ ಹಿರಿಮೆಯನ್ನು ಪ್ರಕಟಿಸಿ ಮೆರೆದ ಮಹಾನ್ ಕಲಾವಿದ ಚಿಟ್ಟಾಣಿ. ಬಾಲ್ಯದಲ್ಲೇ ವೇಷ ಕಟ್ಟಿ ರಂಗ ಪ್ರವೇಶಿಸಿದ ಚಿಟ್ಟಾಣಿ ಆಯಾ ಕಾಲದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸೂಕ್ತ ಎಚ್ಚರದಿಂದ ತನ್ನ ತಾರಾ ಪಟ್ಟವನ್ನು ಕಾದುಕೊಂಡಿದ್ದಾರೆಂಬುದು ಅತಿಶಯವಲ್ಲ. "ಮೊದಲು ಪ್ರೇಕ್ಷಕನಿಗೆ ಸಹನೆಯಿತ್ತು. ಇಂದು ವಿಮರ್ಶಾಪ್ರವೃತ್ತಿಯಿದೆ." ಎಂದು ತಾವು ಸಾಗಿದ ದಾರಿಯ ಅನುಭವಗಳನ್ನು ಸಂಕೋಚವಿಲ್ಲದೆ ಹಂಚಿಕೊಳ್ಳುವ ಸಹೃದಯತೆ ಅವರಲ್ಲಿದೆ. ಸ್ವಯಂ ಸಾಧಿಸಿದ ಖಚಿತ ಅಭಿಪ್ರಾಯವಿದೆ. ಅದು ಸುದೀರ್ಘ ಬದುಕಿನ ಅನುಭವಗಳ ಸಮ್ಮಿಶ್ರಣದಿಂದ ರೂಪಿತವಾಗಿದೆ.

ಚಿಟ್ಟಾಣಿಯವರು ಯಕ್ಷಗಾನ ಪ್ರವೇಶಿಸಿದ್ದು ಅವರ ಹದಿನಾಲ್ಕರ ಪ್ರಾಯದಲ್ಲಿ. ಅಂದರೆ ಸರಿ ಸುಮಾರು ಅರವತ್ಮೂರು ವರ್ಷಗಳಿಂದ ಈ ರಂಗದಲ್ಲಿ ಅನುಭವ ಹೊಂದಿದ್ದಾರೆ. ಆರಂಭದಲ್ಲಿ ಒಂದೆರಡು ವರ್ಷ ಮಾತ್ರಾ ಸಾಮಾನ್ಯ ಕಲಾವಿದರಂತೆ ಸಣ್ಣ ಪುಟ್ಟ ವೇಷಗಳನ್ನು ಮಾಡಿರಬಹುದಾದರು ನಂತರ ಗುರ್ತಿಸಲ್ಪಡುವ ಸ್ಥಾನವನ್ನು ಗಳಿಸಿಕೊಂಡರು. ತಮ್ಮದೇ ಆದ ವಿಶಿಷ್ಟ ನರ್ತನ, ಲಯಗಾರಿಕೆ, ಅಭಿನಯ ಕೌಶಲಗಳಿಂದ ಬಹುಪ್ರಿಯರಾದರು. ಮೇಳಗಳ ಅತಿಮುಖ್ಯ ಅನಿವಾರ್ಯ ಕಲಾವಿದರಾದರು. ಅಪಾರ ಅಭಿಮಾನಿಗಳ ಹೃನ್ಮನ ಸೂರೆಗೊಂಡರು. ಒಮ್ಮೆ ಈ ಕ್ಷೇತ್ರವನ್ನು ಆಯ್ದುಕೊಂಡಮೇಲೆ ಏರಿಳಿತಗಳನ್ನು ಕಂಡಿರಬಹುದಾದರೂ ಕ್ಷೇತ್ರದಿಂದ ವಿಮುಖರಾಗಲಿಲ್ಲ. ಮತ್ತೊಂದರತ್ತ ಯೋಚಿಸಲಿಲ್ಲ ಎಂಬುದು ಜೀವನ ತಪಸ್ಸಿನಂತೆ ಗೋಚರಿಸುತ್ತದೆ.
ಇನ್ನು ಸನ್ಮಾನಗಳ ಬಗ್ಗೆ ಯೋಚಿಸಿದರೆ ಚಿಟ್ಟಾಣಿಯವರು ಮೊದಲ ಸನ್ಮಾನವನ್ನು ಪಡೆದದ್ದು ತಮ್ಮ ಇಪ್ಪತ್ತರ ಹರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಾಳೆಗದ್ದೆಯಲ್ಲಿ. ನಂತರ ಅರೆ ಅಂಗಡಿ ಎಂಬಲ್ಲಿ ಅಂದಿನ ಮಹೋನ್ನತ ಕಲಾವಿದರಾದ ದಿ|| ಕೆರೆಮನೆ ಶಿವರಾಮ ಹೆಗಡೆಯವರಿಂದ ಐದು ಸಾವಿರ ರುಪಾಯಿ ನಿಧಿಯೊಂದಿಗೆ ಪಡೆದ ಸನ್ಮಾನ ಅವಿಸ್ಮರಣೀಯ. ಕೆಲವು ಊರುಗಳಲ್ಲಿ ಮುಂಬೈ, ಮಂಗಳೂರು, ಉಡುಪಿ, ಮೈಸೂರು, ಬೆಂಗಳೂರು, ಶಿವಮೊಗ್ಗ ಮುಂತಾದ ನಗರಗಳಲ್ಲಿ ಪಡೆದ ಸನ್ಮಾನಗಳು ಲೆಕ್ಕವಿಲ್ಲದಷ್ಟು. ದಕ್ಷಿಣ - ಉತ್ತರ ಕರ್ನಾಟಕ, ಹೊರರಾಜ್ಯಗಳಲ್ಲಿ ಕೂಡಾ ಇವರಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಅಲ್ಲೆಲ್ಲಾ ಸನ್ಮಾನಗಳಾಗಿವೆ. ಅವರು ಪಡೆದ ಸನ್ಮಾನಗಳ ಖಚಿತ ವಿವರಗಳು ಸಿಕ್ಕಲಾರವು. ಮನೆಯ ಗೋಡೆಗಳೆಲ್ಲಾ ಪ್ರಶಸ್ತಿ ಪತ್ರಗಳಿಂದ ತುಂಬಿ ಹೋಗಿದೆ. ನೂರಾರು ಸನ್ಮಾನ ಪತ್ರಗಳು ಗೆದ್ದಲಿನಿಂದ ಹಾಳಾದುದನ್ನು ಪತ್ನಿ ಸುಶೀಲ ಮತ್ತು ಮನೆಯವರು ಸ್ಮರಿಸುತ್ತಾರೆ. ಚಿಟ್ಟಾಣಿಯವರು ಶೇಣಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಜಾನಪದ ಶ್ರೀ, ಉಡುಪಿಯ ಆಸ್ಥಾನ ಕಲಾವಿದ, ರಾಮಕೃಷ್ಣ ಹೆಗಡೆಯವರಿಂದ ಪುರಸ್ಕಾರ, ರಾಜ್ಯಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿವರಾಮಹೆಗಡೆ ವಾರ್ಷಿಕ ಪುರಸ್ಕಾರ, ಅನೇಕ ಮಠ ಮಾನ್ಯಗಳಿಂದ ಪುರಸ್ಕಾರ, ಅನೇಕ ಸಂಘಸಂಸ್ಥೆಗಳು ಮಾಡಿದ ಸನ್ಮಾನಗಳು, ಕಾರ್ಯಕ್ರಮ ಸಂಘಟಕರು ನಡೆಸಿದ ಸ್ಪರ್ಧಾತ್ಮಕ ಪ್ರದರ್ಶನಗಳಲ್ಲಿ ಜಯಶಾಲಿಯಾಗಿ ಪಡೆದ ಸನ್ಮಾನಗಳು ಪ್ರಶಸ್ತಿಗಳು ಹೊರನಾಡು , ಹೊರದೇಶಗಳಲ್ಲಿ ಹೃದಯಸ್ಪರ್ಶೀ ಸನ್ಮಾನಪಡೆದ ಭಾಗ್ಯಶಾಲಿ. ನೂರಾರು ಬಿರುದು ಹೊತ್ತ ಸಾಮರ್ಥ್ಯಶಾಲಿ.

ಚಲನ ಚಿತ್ರದ ಮೇರು ನಟ ದಿ|| ಡಾ|| ರಾಜ್ ಕುಮಾರ್ ಒಮ್ಮೆ ಬೆಳ್ಳಿ ಕಿರೀಟವಿತ್ತು ಸನ್ಮಾನಿಸಿದ್ದರು. ಹೊನ್ನಾವರದಲ್ಲಿ ಆಟ ನೋಡಲು ಬಂದಿದ್ದ ಉದಯ ಕುಮಾರ್ ಇವರ ದುಷ್ಟ ಬುದ್ಧಿಯ ಪಾತ್ರವನ್ನು ನೋಡಿ ವೇದಿಕೆಗೆ ಬಂದು ಪಾದಮುಟ್ಟಿ ನಮಸ್ಕರಿಸಿದ್ದನ್ನು ನೆನಪಿಸಿಕೊಂಡು ಮುಗುಳ್ನಗುತ್ತಾರೆ. ಯಾವುದೇ ಕಲಾವಿದರನ್ನು ಮೆಚ್ಚಿಸುವ ಬೆಚ್ಚಿಸುವ ಕಲಾತ್ಮಕತೆ ಇವರಲ್ಲಿದೆ. ಹಲವಾರು ಸಿನಿಮಾ ತಾರೆಯರು, ಅನೇಕ ವಿದೇಶೀಯರೂ ಇವರ ನರ್ತನ ಕೌಶಲವನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕಲಾಧರನ ಪಾತ್ರದಲ್ಲಿ ತರುಣರನ್ನು ಬೆರಗಾಗಿಸುವಂತೆ ನರ್ತಿಸಿ ರಂಜಿಸಿದ್ದಾರೆ.

ಇಬ್ಬರು ಸಂಶೋಧಕರು ಚಿಟ್ಟಾಣಿಯವರ ಕುರಿತಾಗಿ ಅಧ್ಯಯನ ನಡೆಸಿ ಡಾಕ್ಟರೇಟ್ ಪಡೆದಿದ್ದಾರಾದರು ಯಾವುದೇ ವಿಶ್ವ ವಿದ್ಯಾನಿಲಯವು ಇವರನ್ನು ಗುರ್ತಿಸಿ ಗೌರವ ಡಾಕ್ಟರೇಟ್ ಕೊಟ್ಟಿಲ್ಲ. ಮನೆತುಂಬಾ ಸಾವಿರಾರು ಸಂಮಾನಪತ್ರಗಳ ರಾಶಿ ರಾಶಿ ಬಿದ್ದಿದ್ದರೂ ವಶೀಲಿಗಳಿಂದ ಪಡೆಯ ಬೇಕಾದ ಯಾವ ಪ್ರಶಸ್ತಿಯ ಗೋಜಿಗೂ ಇವರು ಹೋಗಿಲ್ಲ. ಲಕ್ಷಗಟ್ಟಲೆ ನಿಧಿ ಸಮರ್ಪಿಸಿ ಅಭಿಮಾನೀ ಕಲಾರಸಿಕರು ನೀಡಿದ ಸನ್ಮಾನಗಳು ಇವರ ಜನಪ್ರೀಯತೆಗೆ ಸಾಕ್ಷಿಯಾಗಿದೆ. ಕೇವಲ ನಾಲ್ಕು ದಿನಗಳಿಗೆಂದು ಅಮೆರಿಕಾಕ್ಕೆ ಹೋದವರು ಅಲ್ಲಿ ಒಂದೂವರೆ ತಿಂಗಳು ಕಾಲ ಉಳಿದು ಹದಿನೈದು ಪ್ರದರ್ಶನಗಳನ್ನು ನೀಡಿ ಅಲ್ಲಿನ ಕನ್ನಡಿಗರನ್ನಷ್ಟೇ ಅಲ್ಲ ಅಮೆರಿಕನ್ನರನ್ನೂ ಮೆಚ್ಚಿಸಿದರು.

ಅಭಿಮಾನಿಗಳ ಪ್ರೀತಿಯೇ ತನ್ನ ಯಶಸ್ಸಿನ ಗುಟ್ಟೆನ್ನುವ ಇವರು, ಅವರಿಗೊದಗಿಸುವ ರಂಜನೆಯೇ ಕೃತಜ್ಞತೆಯೆನ್ನುತ್ತಾರೆ. ಅವರು ಮೆಚ್ಚಿ ಆಡುವ ಒಂದೊಂದು ಮಾತು ಬದುಕಿನ ಸನ್ಮಾನಗಳೆನ್ನುತ್ತಾರೆ. ಅರವತ್ತಕ್ಕೂ ಹೆಚ್ಚು ವರ್ಷಗಳಿಂದ ಸತತ ಜನಪ್ರೀಯತೆ ಕಾಯ್ದು ಕೊಂಡ ವ್ಯಕ್ತಿಗಳೆಷ್ಟು ಮಂದಿಯಿದ್ದಾರೆ ನಮ್ಮಲ್ಲಿ? ನಿರಂತರ ಕಾಯಕದಲ್ಲಿ ಅದೆಷ್ಟು ಏರಿಳಿತಗಳನ್ನು ಚಿಟ್ಟಾಣಿ ಕಂಡಿರಬಹುದಾದರು ಮುಗ್ಧ ಮಗುವಿನಂಥಹ ಮನೋಭಿತ್ತಿ ಅವರದ್ದು. ಅಲ್ಲಿ ಕಲೆಯ ಹೊರತಾಗಿ ಮತ್ತೇನಕ್ಕು ಆಸ್ಪದವಿಲ್ಲ. ಕೃತಕವಿಲ್ಲ. ಪಾತ್ರ ತನ್ಮಯತೆ ಅವರ ಸಹಜ ಗುಣದಂತಾಗಿದೆ. ಪ್ರವೇಶ ಮಾಡಿದ ಕ್ಷಣದಲ್ಲೇ ಮಿಂಚಿನ ಸಂಚಾರವನ್ನು ಮೂಡಿಸುವ ಅಸಾಧಾರಣ ಪ್ರತಿಭೆಯಿದೆ. ಈ ಮಹಾ ಪ್ರತಿಭೆಯಲ್ಲಿ ಅನೇಕ ಗುಣ ವಿಶೇಷಗಳು ಸ್ವಾರಸ್ಯಗಳು ಇವೆ.

ವಿದ್ಯಾಭ್ಯಾಸವೆಂಬುದು ಕೇವಲ ಎರಡನೇ ತರಗತಿಯಷ್ಟೇ. ಯಕ್ಷಗಾನಕ್ಕೆ ಮಾರು ಹೋಗಿ ಶಾಲೆಗೆ ತಪ್ಪಿಸಿ ಗುಡ್ದವೇರಿ ಮರದ ಕೆಳಗೆ ತಾ ಗುಡ್ತಾಗ ಧೀಂ, ತಾ ಗುಡ್ತಾಗ ಧೀಂ, ತೊಂ, ತೊಂ, ತೊಂ ಎಂದು ಕುಣಿಯುವುದು. ಚಿಕ್ಕಪ್ಪನೊಂದಿಗೆ ಆಟ ಕಲಿಯಲು ಹೋಗಿ ರಾಮಕೃಷ್ಣ ಭಟ್ಟರೆಮ್ಬವರಲ್ಲಿ ಅಲ್ಪ ಸ್ವಲ್ಪ ಕಲಿತು ಸ್ಥಳೀಯ ಮೇಳದಲ್ಲಿ ಸಣ್ಣಪುಟ್ಟ ವೇಷದೊಂದಿಗೆ ಕ್ಷೇತ್ರಕ್ಕೆ ಪಾದಾರ್ಪಣ ಮಾಡಿದರು. ಶ್ರೀಕೃಷ್ಣ ಪಾರಿಜಾತ ಯಕ್ಷಗಾನದಲ್ಲಿ ಎರಡು ಪದ್ಯದ ಅಗ್ನಿಯ ಪಾತ್ರವೇ ಚಿಟ್ಟಾಣಿ ಮಾಡಿದ ಮೊದಲ ವೇಷ. ಕೇಳಿದ ಸಂಗತಿಗಳೇ ಸಾಹಿತ್ಯವಾಗಿದ್ದಾಗ ಮುದ್ರಿತ ಅಕ್ಷರಗಳನ್ನು ಓದಲು ಕಲಿತು, ಅ.ನಾ.ಕೃ. ತ.ರಾ.ಸು. ಕಾದಂಬರಿಗಳನ್ನು ಓದಿ ಅರ್ಥ ಮಾಡಿಕೊಂಡು ಮಾತಿನಲ್ಲಿ ಜೋಡಿಸಿದರು.

ಮುಂಬಯಿಯಲ್ಲೊಮ್ಮೆ ಆಟ ನೋಡಲು ಬಂದ ಮರಾಠಿಗರೊಬ್ಬರು ಚೌಕಿಗೆ ( ಬಣ್ಣದ ಮನೆ ) ಬಂದರು. ಅಂದು ಭಸ್ಮಾಸುರನ ಪಾತ್ರ ಮಾಡುವವರಾರೆಂದು ವಿಚಾರಿಸಿ ಚಿಟ್ಟಾಣಿಯವರ ಸಾಮಾನ್ಯ ಶರೀರವನ್ನು ನೋಡಿ ತಿರಸ್ಕಾರ ಭಾವದಿಂದ ಹೋಗಿ ಆಟ ನೋಡಲು ಕುಳಿತರು. ಅಟ ಪ್ರಾರಂಭವಾಯಿತು. ಭಸ್ಮಾಸುರನ ಪ್ರವೇಶವಾಗುತ್ತಲೇ ಬೆಚ್ಚಿ ಕುಳಿತರು. ಆಟ ಮುಗಿಯುತ್ತಲೇ ಮತ್ತೆ ಚೌಕಿಗೆ ಬಂದು ಚಿಟ್ಟಾಣಿಯವರು ಇಳಿದು ಕೊಂಡಿದ್ದ ಹೋಟೆಲ್ಲಿನ ವಿಳಾಸ ಹಾಗೂ ಅವರು ಮುಂಜಾನೆ ಏಳುವ ಸಮಯಗಳನ್ನು ತಿಳಿದುಕೊಂಡು ಹೋದವರು, ಮಾರನೆ ದಿನ ಚಿಟ್ಟಾಣಿಯವರು ಏಳುವ ಹೊತ್ತಿಗೆ ಬಾಗಿಲ ಬಳಿ ಚಹಾದೊಂದಿಗೆ ಹಾಜರ್. ಅ ವರ್ಷ ಚಿಟ್ಟಾಣಿಯವರು ಮುಂಬಯಿಯಲ್ಲಿದ್ದಷ್ಟು ದಿನವು ಮುಂಜಾನೆಯ ಚಹಾವನ್ನು ಅವರೇ ತಂದು ಕೊಡುತ್ತಿದ್ದರು. ಕುಮಟಾದಲ್ಲಿ ಕೀಚಕ-ಕೀಚಕ- ಕೀಚಕ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ತನ್ನ ಹಳೆಯ ನೃತ್ಯ ಕೌಶಲವನ್ನು ಪ್ರದರ್ಶಿಸಿ ಪ್ರಥಮ ಬಹುಮಾನವನ್ನು ದೊಡ್ಡಮೊತ್ತದೊಂದಿಗೆ ಗಳಿಸಿದರು.
ಅನೇಕ ಮೇಳಗಳಲ್ಲಿ ಭಿನ್ನ ಭಿನ್ನ ಕಲಾವಿದರುಗಳೊಂದಿಗೆ ಸಾಕಷ್ಟು ಕಲಿತು, ಕಿರಿಯರಿಗೆ ಕಲಿಸಿ ಅನುಭವ ಹೊಂದಿದ್ದಾರೆ. ಚಿಟ್ಟಾಣಿಯವರ ಕುಟುಂಬದಲ್ಲಿ ಅವರ ಇಬ್ಬರು ಮಕ್ಕಳು ಸುಬ್ರಹ್ಮಣ್ಯ ಚಿಟ್ಟಾಣಿ, ಮತ್ತು ನರಸಿಂಹ ಚಿಟ್ಟಾಣಿಯವರಲ್ಲದೆ ಮೊಮ್ಮಕ್ಕಳು ಈ ಕ್ಷೇತ್ರಕ್ಕೆ ಬಂದು ಭರವಸೆಯ ಕಲಾವಿದರಾಗಿದ್ದಾರೆ. ಚಿಟ್ಟಾಣಿಯವರಿಗೆ ರಾಷ್ಟ್ರದ ಉನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಲಭಿಸಿದೆ. ಇದು ಒಬ್ಬ ಸಾಧಕನಿಗಷ್ಟೇ ಅಲ್ಲ. ಇಡೀ ಯಕ್ಷಪ್ರಪಂಚಕ್ಕೆ ಸಂದ ಮೊದಲ ಪ್ರಶಸ್ತಿಯಾಗಿದೆ.

- ಲೇಖನ : ಸದಾನಂದ ಶರ್ಮ ಬಿ. ಪ್ರಜ್ಞಾ ಭಾರತಿ ವಿದ್ಯಾಮಂದಿರ (ರಿ.)ಜ